ಬಜ್ಪೆ: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಪ್ರಕರಣದಲ್ಲಿ 5 ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾದ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಮತ್ತು ಚಿನ್ನಾಭರಣ ಪಡೆದುಕೊಂಡು ಚಿನ್ನದ ಗಟ್ಟಿಯಾಗಿಸಿದ್ದ ಬಜ್ಪೆ ಮೂಡು ಪೆರಾರ ನಿವಾಸಿ ರವಿರಾಜ್ ಎಂದು ತಿಳಿದು ಬಂದಿದೆ.
ರಾಜೇಶ್ವರಿ ಪದ್ಮಶಾಲಿ ಅವರು ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭ ಅವರ ಲಗೇಜ್ ಟ್ರೋಲಿ ಬ್ಯಾಗನ್ನು ತೆರೆದು 4.5ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಕುರಿತು ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸರು ತನಿಖೆ ಆರಂಭಿಸಿ ವಿಮಾನ ನಿಲ್ದಾಣದ ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಚಿನ್ನಾಭರಣ ಕಳವುಗೈದು ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬಳಿಕ ರವಿರಾಜ್ ನನ್ನು ಬಂಧಿಸಿದ ಬಜ್ಪೆ ಪೊಲೀಸರು ಆತನ ಬಳಿಯಿಂದ ಮಹಿಳೆಯ ಚಿನ್ನಾಭರಣವನ್ನು ಕರಗಿಸಿ ಮಾಡಿದ್ದ ಚಿನ್ನದ ಗಟ್ಟಿ ಸೇರಿ ಸುಮಾರು 5ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




