ಮಂಗಳೂರು: ನಾನು ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ. ಆದರೆ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಯಸ್ಸಿನ ಕಾರಣದಿಂದಾಗಿ ನನ್ನ ಸ್ಪರ್ಧೆಯ ಬಗ್ಗೆ ಪಕ್ಷದವರೇ ಅಪಸ್ವರ ಎತ್ತಿದ್ದರಿಂದಾಗಿ ಮುಂದೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ.
ಆದರೆ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸದಲ್ಲಿ ಸಕ್ರಿಯನಾಗಿರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಹಿಂದಿನಿಂದಲೂ ಹೈಕಮಾಂಡ್ ನ ಎಲ್ಲ ಆದೇಶ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ. ಈ ಬಾರಿ ನನ್ನ ಸೋಲಿನ ಮತಗಳ ಅಂತರ ಕಡಿಮೆಯಾಗಿದೆ. ಗೆಲುವಿನ ವಿಶ್ವಾಸವಿತ್ತು. ಆದರೂ ಸೋಲಾಗಿದೆ ಎಂದರು. ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಇದರಿಂದ ಕಾರ್ಯಕರ್ತರು ಎದೆಗುಂದ ಬೇಕಾಗಿಲ್ಲ. ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ರಮಾನಾಥ ರೈ ಹೇಳಿದರು.