ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ತೆರಳುತ್ತಿದ್ದ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ವೈದ್ಯರು ಕರ್ತವ್ಯಕ್ಕೆ ತಡವಾಗಿ ಹೋಗುತ್ತಿದ್ದಾರೆಂದು ಸುಳ್ಳು ಆಪಾದನೆ ಹೊರಿಸಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಸರಕಾರಿ ಆಸ್ಪತ್ರೆಯಿಂದ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಡಿ.10ರಂದು ಬೆಳಗ್ಗೆ ಪುಂಜಾಲಕಟ್ಟೆ ಯಿಂದ ಸುಮಾರು 29 ವರ್ಷದ ವ್ಯಕ್ತಿ ಆಸ್ಪತ್ರೆಗೆ ಕರೆ ತರುವಾಗ ಮೃತಪಟ್ಟಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯ ಮೊದಲು ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ಪರೀಕ್ಷೆಗೆ ಪುಂಜಾಲ ಕಟ್ಟೆಯಿಂದ ಪೊಲೀಸರು ಬರಬೇಕಾ ಗಿತ್ತು. ಪೊಲೀಸರು ಮಧ್ಯಾಹ್ನದ ಬಳಿಕ ಬಂದಿದ್ದರು. ಬಳಿಕ ಅವರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಮನವಿ ನೀಡುವ ಕಾರ್ಯ ಮಾಡಿದರು.
ಸಂಜೆ ವೇಳೆ ಎಲ್ಲ ಪ್ರಕ್ರಿಯೆ ಮುಗಿದು ಕರ್ತವ್ಯದಲ್ಲಿದ್ದ ಡಾ.ಶ್ವೇತಾ ಮರಣೋತ್ತರ ಪರೀಕ್ಷೆಗೆ ಹೋಗುವ ಸಂದರ್ಭ ಮೃತರ ಕಡೆಯವರು ಎನ್ನಲಾದ ಕೆಲವರು ವೈದ್ಯರು ತಡವಾಗಿ ಬಂದಿರುವುದಾಗಿ ಆರೋಪಿಸಿ ಅವರನ್ನು ತರಾಟೆಗೆತ್ತಿಕೊಂಡು ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸಾ ಸಂದರ್ಭ ಬಿಟ್ಟು ಬರಲಾಗುವುದಿಲ್ಲ ಎಂದು ಹೇಳಿದರೂ ಅಲ್ಲಿ ನೆರೆದವರು ವೈದ್ಯರನ್ನು ತರಾಟೆಗೆತ್ತಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈ, ವೈದ್ಯೆ ಡಾ| ಶ್ವೇತಾ, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ ಅವರು ಸರಕಾರಿ ಕರ್ತವ್ಯದ ವೇಳೆ ಅಡ್ಡಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆಪಾದನೆಯ ವೀಡಿಯೋ ಹಾಕಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.