ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜನರು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಇದೀಗ ಹೊಸದೊಂದು ಅಧ್ಯಯನ ವರದಿ ಬಹಿರಂಗವಾಗಿದ್ದು, ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹ ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ ಎಂಬ ಅಂಶ ಗಮನಾರ್ಹವಾಗಿದೆ.
ಟೈಪ್ 2 ಡಯಾಬಿಟಿಸ್ ಜಾಗತಿಕ ಸಾರ್ವಜನಿಕ ಆರೋಗ್ಯ ಸವಾಲಾಗಿದೆ ಮತ್ತು 2045 ರ ವೇಳೆಗೆ 693 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಹೃದಯಾಘಾತ, ಪಾರ್ಶ್ವವಾಯು, ಕುರುಡುತನ, ಮೂತ್ರಪಿಂಡ ವೈಫಲ್ಯ ಮತ್ತಿತರ ಪ್ರತಿಕೂಲ ಆರೋಗ್ಯ ಪರಿಣಾಮ ಬೀರುವುದು.
ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಮ್ ಜರ್ನಲ್ ನಲ್ಲಿ ಪ್ರಕಟವಾದ 27 ಪ್ರಯೋಗಗಳ ಮೆಟಾ- ವಿಶ್ಲೇಷಣೆಯ ಆಧಾರದ ಮೇಲೆ ಅಧ್ಯಯನವು ಗ್ರೀನ್ ಟೀ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಸಾಂದ್ರತೆಯ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತದೆ ಎಂದು ತೋರಿಸಿದೆ.
ಚೀನಾದ ಹುವಾಜಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ತಂಡವು ಅಧ್ಯಯನಕ್ಕೆ ಒಳಪಟ್ಟ 2,194 ಮಂದಿಯ ಮಾಹಿತಿ ಮುಂದಿಟ್ಟುಕೊಂಡು ಫಲಿತಾಂಶಗಳನ್ನು ಪರಿಶೀಲಿಸಿದೆ. ಪೂಲ್ ಮಾಡಿದ ಫಲಿತಾಂಶಗಳು ಹಸಿರು ಚಹಾವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಗ್ರೀನ್ ಟೀಯನ್ನು ಕ್ಯಾಮೆಲಿಯಾ ಸಿನೆನ್ಸಿಸ್ನ ತಾಜಾ ಎಲೆಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ಅದು ಆಹಾರ ಮತ್ತು ಔಷಧೀಯ ಪಾತ್ರವನ್ನು ಸಹ ವಹಿಸಿದೆ.
ಇದು ವಿಟಮಿನ್, ಕಾರ್ಬೋಹೈಡ್ರೇಟ್, ಪ್ರೋಟಿನ್, ಐರನ್ ಮತ್ತು ಫ್ಲೇವನಾಯ್ಡ್ ತರಹದ ಪಾಲಿಫಿನಾಲ್ಗಳನ್ನು ಒಳಗೊಂಡಂತೆ ವಿವಿಧ ಪರಿಣಾಮಕಾರಿ ಸಂಯುಕ್ತಗಳನ್ನು ಒಳಗೊಂಡಿದ್ದು, ಮಧುಮೇಹವನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡಲಾಗಿದೆ.