ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಭರ್ಜರಿಯಾಗಿ ಏರಿಕೆ ಕಾಣುತ್ತಿದ್ದು, ಕೋವಿಡ್ ಬಳಿಕ ನಿರಂತರವಾಗಿ ಉತ್ತಮ ಪ್ರಗತಿ ದಾಖಲಿಸಿದೆ.
ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಮಂಗಳೂರು ಕೇಂದ್ರೀಯ ತೆರಿಗೆಗಳ ಆಯುಕ್ತಾಲಯದ ಮಾಹಿತಿಯ ಪ್ರಕಾರ 2021-22ನೇ ಸಾಲಿನಲ್ಲಿ ಗುರಿ ಮೀರಿದ ಸಾಧನೆಯಾಗಿದೆ.
2022-23ರಲ್ಲೂ ಎಪ್ರಿಲ್-ನವೆಂಬರ್ ಅವಧಿಯಲ್ಲಿ ಭರ್ಜರಿ ತೆರಿಗೆ ಸಂಗ್ರಹಿಸಿದೆ. 2021-22ರಲ್ಲಿ 2,629 ಕೋಟಿ ರೂ. ಗುರಿಯಿದ್ದರೆ 2,897.21 ಕೋಟಿ ರೂ. ಸಂಗ್ರಹಿಸಲಾಗಿತ್ತು. 2022-23ನೇ ಸಾಲಿಗೆ 3,539 ಕೋಟಿ ರೂ. ಗುರಿ ಇದ್ದರೆ ನವೆಂಬರ್ ಅಂತ್ಯದ ವೇಳೆಗೆ 2,326.59 ಕೋಟಿ ರೂ. ಸಂಗ್ರಹವಾಗಿದೆ.
ಎಪ್ರಿಲ್‌ನಿಂದ ನವೆಂಬರ್‌ವರೆಗೆ ಸಂಗ್ರಹವಾದ ಜಿಎಸ್‌ಟಿ ಯನ್ನೇ ವಿಶ್ಲೇಷಿಸಿದರೆ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ. ಎಪ್ರಿಲ್-ನವೆಂಬರ್ ವಿವರ ನೋಡಿದಾಗ, 2020-21ರಲ್ಲಿ 1,167.02 ಕೋಟಿ ರೂ. ಗುರಿಯಿದ್ದರೆ 1,200.35 ಕೋಟಿ ರೂ. ಸಂಗ್ರಹ ವಾಗಿತ್ತು. 2021-22ನೇ ಸಾಲಿನಲ್ಲಿ 1,596.25 ಕೋಟಿ ರೂ. ಗುರಿಯಿದ್ದು, 1,745.45 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷವೂ ನವೆಂಬರ್ ವರೆಗಿನ ಗುರಿ 1,949.99 ಕೋಟಿ ರೂ. ಇದ್ದು, ಈಗಾಗಲೇ ಸಂಗ್ರಹ 2,326.59 ಕೋಟಿ ರೂ. ಆಗಿರುವುದು ಜಿಎಸ್‌ಟಿ ಅಧಿಕಾರಿಗಳ ಖುಷಿಗೆ ಕಾರಣವಾಗಿದೆ.
ಜಿಎಸ್‌ಟಿ ಸಂಗ್ರಹದಲ್ಲಿ ಪೆಟ್ರೋಲಿಯಂ ಉತ್ಪನ್ನಗಳದ್ದೇ ಸಿಂಹ ಪಾಲು. 2021-22ರಲ್ಲಿ 696.69 ಕೋಟಿ ರೂ. ಇದ್ದ ಸಂಗ್ರ ಹವು 2022-23ನೇ ಸಾಲಿನ ಅಕ್ಟೋಬರ್ ವರೆಗಿನ ಲೆಕ್ಕಾಚಾರ ದಂತೆ 1,049.34 ಕೋಟಿ ರೂ.ನಷ್ಟು ಭರ್ಜರಿ ಏರಿಕೆ ಕಂಡಿದೆ.