ಉಡುಪಿ: ಮೂರು ದಿನಗಳ ಹಿಂದೆ ಉಡುಪಿಯಲ್ಲಿ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಯು ಚಾಕೊಲೇಟ್ ಆಸೆ ತೋರಿಸಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಅಪರಿಚಿತನಾಗಿದ್ದರಿಂದ, ಆತನ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು. ಹಲವಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಆರೋಪಿಯ ಮಾಹಿತಿಯನ್ನು ಸಾರ್ವಜನಿಕರಿಗೂ ಪ್ರಚಾರಪಡಿಸಲಾಗಿತ್ತು. ಸಾರ್ವಜನಿಕರ ಸಹಾಯ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಸತತ ಪ್ರಯತ್ನದಿಂದ ಬಾಗಲಕೋಟೆ ಜಿಲ್ಲೆಯ ಆರೋಪಿ ಮುತ್ತು (35) ಎಂಬಾತನನ್ನು ಶ್ರೀಕೃಷ್ಣಮಠದ ಪರಿಸರದ ವಾದಿರಾಜ 3ನೇ ಕ್ರಾಸ್ ಬಳಿ ಪತ್ತೆ ಮಾಡಲಾಗಿದೆ.
ಆರೋಪಿಯು ಉಡುಪಿಯಲ್ಲಿ ಯಾವುದೇ ವಿಳಾಸವನ್ನು ಹೊಂದದೆ ಅಲೆಮಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.