ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 11 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ವಿಮಾನದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಇವರು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಿಮಾನದಲ್ಲಿದ್ದ ಮುಖ ಗವಸು ಧರಿಸಿದ್ದ ಪುರುಷ ಪ್ರಯಾಣಿಕನೊಬ್ಬನ ಕೆನ್ನೆಯ ಭಾಗ ಅಸಹಜವಾಗಿ ಕಂಡು ಬರುತ್ತಿತ್ತು. ಅದರಂತೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಾಯಲ್ಲಿ ಎರಡು ಚಿನ್ನದ ತುಂಡುಗಳು ಪತ್ತೆಯಾಗಿದೆ. ಈತ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಅದೇ ರೀತಿ ಮಹಿಳಾ ಪ್ರಯಾಣಿಕೆಯೊಬ್ಬಳು ತನ್ನ ಕೂದಲನ್ನು ಕಟ್ಟಿರುವ ಹ್ಯಾರ್ ಬ್ಯಾಂಡ್‌ನೊಳಗಡೆ ಚಿನ್ನವನ್ನು ಮರೆಮಾಡಿ ಸಾಗಾಟ ಮಾಡುತ್ತಿದ್ದಳು. ಎರಡು ಪ್ರಕರಣಗಳಲ್ಲಿ, ಒಟ್ಟು 191 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,44,090 ರೂ. ಎಂದು ಅಂದಾಜಿಸಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.