ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಇಂದು ಗೋವಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಬಂಧಿತ ಆರೋಪಿ ಕಂಡ್ಲೂರು ಕಾವ್ರಾಡಿ ನಿವಾಸಿ ಮುಸೀನ್ ಸಾಹೇಬ್(29) ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ 2017ರಲ್ಲಿ ಕುಂದಾಪುರ ನ್ಯಾಯಾಲಯ ದಿಂದ ಜಾಮೀನು ಪಡೆದುಕೊಂಡಿದ್ದನು. ಆ ಬಳಿಕ ಆತ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಈ ಸಂಬಂಧ ಈತನ ವಿರುದ್ಧ ಒಟ್ಟು 13 ಬಾರಿ ದಸ್ತಗಿರಿ ವಾರೆಂಟನ್ನು ಹೊರಡಿಸಲಾಗಿತ್ತು. ಈತ ಹೊರದೇಶಕ್ಕೆ ಹೋಗಿರಬಹುದೆಂಬ ಸಂಶಯದಲ್ಲಿ ಆತನ ವಿರುದ್ದ ಎಲ್.ಓ.ಸಿ.ಯನ್ನು ತೆರೆಸಲಾಗಿತ್ತು. ಅದರಂತೆ ಮುಸೀನ್ ಗೋವಾ ರಾಜ್ಯದ ದಾಬೋಲಿಮ್ ಏರ್ ಪೋರ್ಟ್‌ಗೆ ಬಂದಿಳಿರುವ ಮಾಹಿತಿ ಬಂದಿದ್ದು, ಅದರಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.