ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ಬಲಗೊಳ್ಳುತ್ತಿದ್ದು ಬೇಡಿಕೆ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಹೈಕೋಟ್ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾದರೆ ದ.ಕ. ಜಿಲ್ಲೆ ಮಾತ್ರವಲ್ಲದೆ ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರಕನ್ನಡ ದವರಿಗೂ ಅನುಕೂಲವಾಗಲಿದೆ. ಅಕ್ಕಪಕ್ಕದ ಜಿಲ್ಲೆಯವರು ಮಂಗಳೂರಿಗೆ ಬರುವುದಕ್ಕೆ ಪೂರಕವಾಗಿ ಎಲ್ಲ ಅಗತ್ಯ ಸೌಕರ್ಯಗಳು ಇಲ್ಲಿವೆ ಎನ್ನುತ್ತಾರೆ ಮಂಗಳೂರಿನ ನ್ಯಾಯವಾದಿಗಳು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ಬೇಡಿಕೆ ಬಹುಕಾಲದ್ದು. 2008ರಲ್ಲಿಯೂ ಹೋರಾಟ ನಡೆದಿತ್ತು. ಅನಂತರವೂ ಹಲವಾರು ಬಾರಿ ಪ್ರಯತ್ನಗಳನ್ನು ನಡೆಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳ ಒಟ್ಟು ಪ್ರಕರಣಗಳು ಹೈಕೋರ್ಟ್‌ನ ಒಟ್ಟು ಪ್ರಕರಣಗಳ ಶೇ. 30ರಷ್ಟಿವೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸ್ಥಳಾವಕಾಶದ ಕೊರತೆಯೂ ಇಲ್ಲ. ಈಗ ಕೊಡಿಯಾಲಬೈಲ್ ನಲ್ಲಿರುವ ಜಿಲ್ಲಾ ಕಾರಾಗೃಹ ಮುಡಿಪುವಿಗೆ ಸ್ಥಳಾಂತರವಾಗಲಿದೆ. ಹಾಗಾಗಿ ಕೊಡಿಯಾಲಬೈಲಿನ 6 ಎಕರೆ ಸ್ಥಳದಲ್ಲಿ ಪೀಠ ಸ್ಥಾಪನೆ ಮಾಡಬಹುದು ಎನ್ನುತ್ತಾರೆ ಮಂಗಳೂರು ವಕೀಲರ ಸಂಘದ ಹಾಲಿ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಮತ್ತು ಮಾಜಿ ಅಧ್ಯಕ್ಷ ಪೃಥ್ವಿರಾಜ್ ರೈ ರವರು.