ಸರ್ಕಾರಿ ಕೆಲಸದಲ್ಲಿದ್ದ ವ್ಯಕ್ತಿ ಕೆಲಸಕ್ಕೆ ಹೋಗದೇ ವಿದೇಶದಿಂದ ಯುವತಿಯರನ್ನು ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ನೌಕರ ರತನ್ ಬಂಧಿತ ಆರೋಪಿ. ಈತ ಕೆ.ಎಸ್.ಆರ್.ಟಿ.ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆದರೆ ಕೆಲಸಕ್ಕೆ ಹೋಗದೇ ವೇಶ್ಯಾವಾಟಿಕೆ ದಂಧೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಥೈಲ್ಯಾಂಡ್ ನಿಂದ ಯುವತಿಯರನ್ನು ಕರೆಸಿ ಮೈಸೂರಿನ ಬೊಗಾದಿ ರಿಂಗ್ ರಸ್ತೆಯಲ್ಲಿನ ಹೋಟೆಲ್ ನಲ್ಲಿ ಈ ದಂಧೆ ನಡೆಸುತ್ತಿದ್ದ. ವಿಷಯ ತಿಳಿದ ಮೈಸೂರಿನ ಸರಸ್ವತಿ ಪುರಂ ಠಾಣೆ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ರತನ್ ಸೇರಿ ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಥೈಲ್ಯಾಂಡ್ ಮೂಲದ ಯುವತಿ ವಿಚಾರಣೆ ವೇಳೆ ತಾನು ಒಂದು ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೆ. ಬಿಸಿನೆಸ್ ಗಾಗಿ ಥೈಲ್ಯಾಂಡ್ ನಿಂದ ಬಂದಿದ್ದಾಗಿ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.