ಹೊಸದಿಲ್ಲಿ: ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಈಗಾಗಲೇ 18 ಮಂದಿ ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ತಡರಾತ್ರಿ ಜನರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ ಮೇಘಸ್ಪೋಟ ಸಂಭವಿಸಿದೆ. ಕಳೆದೆರಡು ದಿನಗಳಿಂದ ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯ ನಡೆಯುತ್ತಿದ್ದು, ಈ ಪೈಕಿ ಹಲವರ ಮೃತದೇಹ ಪತ್ತೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದು, 8 ಮಂದಿ ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡ ಮತ್ತು ಒಡಿಶಾದಲ್ಲಿ ತಲಾ ನಾಲ್ವರು ಸಾವಿಗೀಡಾಗಿದ್ದಾರೆ. ಜಾರ್ಖಂಡ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕುಶಾನ್ ಗ್ರಾಮದಲ್ಲಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ 8 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
2 ಲಕ್ಷ ಮನೆಗಳಿಗೆ ಹಾನಿ
ಜೀವ, ಆಸ್ತಿಪಾಸ್ತಿ ಹಾನಿ, ಸಾರ್ವಜನಿಕ ಸೌಲಭ್ಯಗಳಿಗೂ ಹಾನಿ ಸಂಭವಿಸಿದೆ. ಬೃಹತ್ ಗಾತ್ರದ ಬಂಡೆಕಲ್ಲುಗಳು ಉರುಳಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವರ್ಷದ ಮಳೆಗೆ ಪ್ರವಾಹ ಪರಿಸ್ಥಿತಿಯಿಂದಾಗಿ ಅಸ್ಸಾಂನಲ್ಲಿ 2.04 ಲಕ್ಷ ಮನೆಗಳಿಗೆ ಹಾನಿ ಯಂಟಾಗಿದೆ. ಒಟ್ಟಾರೆ 199 ಮಂದಿ ಕಳೆದ ಮೂರು ತಿಂಗಳಿನಲ್ಲಿ ಸಾವನ್ನಪ್ಪಿದ್ದಾರೆ. 2.41 ಲಕ್ಷ ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ ಎಂದು ಸಿಎಂ ಬಿಸ್ವಂತ್ ಶರ್ಮ ತಿಳಿಸಿರುವುದಾಗಿ ವರದಿಯಾಗಿದೆ. ಒಡಿಶಾದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಈಗಾಗಲೇ 500 ಗ್ರಾಮಗಳು ಜಲಾವೃತವಾಗಿವೆ. ಇಲ್ಲಿ ವಾಸಿಸುವ 4 ಲಕ್ಷ ಮಂದಿ ವಾಸಸ್ಥಾನ ಕಳೆದುಕೊಂಡಿದ್ದಾರೆ.