ನವದೆಹಲಿ: ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸತತ 9ನೇ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಹಿರಿಯ ಸಚಿವರು, ಅಧಿಕಾರಿಗಳು ಮತ್ತು ಲಕ್ಷಾಂತರ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆಯೇ ಭಾರತೀಯ ಸೇನೆಯ ವಿಶೇಷ ಪಡೆಗಳಿಂದ ಅವರು ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ಬಳಿಕ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಲೇ ವಾಯುಸೇನೆಯ ಹೆಲಿಕಾಪ್ಟರ್ ಗಳಿಂದ ಧ್ವಜಕ್ಕೆ ಪುಷ್ಪವೃಷ್ಟಿ ಸುರಿಸಿ ಗೌರವ ಸಲ್ಲಿಸಲಾಯಿತು.
ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಸ್ಮಾರಕ ರಾಜ್ ಘಾಟ್ ಗೆ ತೆರಳಿ ಪುಷ್ಪನಮನ ಸಲ್ಲಿಸಿದರು.
ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನ. ಈ ಕರ್ತವ್ಯದ ಹಾದಿಯಲ್ಲಿ ಜೀವ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ಸಾವರ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಂತೆಯೇ ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ರಾಷ್ಟ್ರ ಕೃತಜ್ಞವಾಗಿದೆ.
ಆಜಾದಿ ಮಹೋತ್ಸವ’ದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರನಾಯಕರನ್ನು ಸ್ಮರಿಸಿದ್ದೇವೆ. ಆಗಸ್ಟ್ 14 ರಂದು, ನಾವು ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಹೇಳಿದರು.
ಇದೇ ವೇಳೆ ಭಾರತ ಮುಂಬರುವ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದೆ ದೇಶವಾಗಿರಬೇಕು. ಯುವಕರು ದೇಶದ ಅಭಿವೃದ್ಧಿಗೆ ಮುಂದಿನ 25 ವರ್ಷ ಮೀಸಲಿಡಬೇಕು. ಇಡೀ ಮಾನವ ಕುಲದ ಅಬಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ.
ನಾವು ಇತರರಂತೆ ಆಗಲು ಪ್ರಯತ್ನಿಸಬಾರದು, ನಮ್ಮ ಮನಸ್ಥಿತಿಯಲ್ಲಿ ಗುಲಾಮಗಿರಿಯ ಕುರುಹು ಇರಬಾರದು. ಕೆಲವೊಮ್ಮೆ ಭಾಷೆಯ ಅಡೆತಡೆಗಳಿಂದ ನಮ್ಮ ಪ್ರತಿಭೆಯನ್ನು ನಿರ್ಬಂಧಿಸಲಾಗುತ್ತದೆ, ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಅವರು ಹೇಳಿದರು. ನಾವು ಹೆಮ್ಮೆಯ ರಾಷ್ಟ್ರವಾಗಿ ನಮ್ಮ ಗುರುತನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು.ನಾವು ನಮ್ಮ ತಲಮಟ್ಟದ ಸಂಪರ್ಕ ಹೊಂದಿದಾಗ ಮಾತ್ರ ನಾವು ಎತ್ತರಕ್ಕೆ ಹಾರಬಹುದು. ನಾವು ಎತ್ತರಕ್ಕೆ ಹಾರಿದಾಗ, ನಾವು ಇಡೀ ಜಗತ್ತಿಗೆ ಪರಿಹಾರಗಳನ್ನು ಒದಗಿಸುತ್ತೇವೆ ಎಂದು ಪ್ರಧಾನಿ ಹೇಳಿದರು.
ವಿದ್ಯುತ್, ನೀರು ಉಳಿಸುವುದು ಜನರ ಕರ್ತವ್ಯ. ನಾವು ಇದನ್ನು ಅನುಸರಿಸಿದರೆ, ನಾವು ಸಮಯಕ್ಕೆ ಮುಂಚಿತವಾಗಿ ಬಯಸಿದ ಅಭಿವೃದ್ಧಿ ಫಲಿತಾಂಶಗಳನ್ನು ತಲುಪಬಹುದು, ಎಂದು ಅವರು ಹೇಳಿದರು, ಈ ಕರ್ತವ್ಯಗಳು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತವೆ.
ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಿದೆ, ಅದರ ನಾಗರಿಕರಲ್ಲಿ ಶಿಸ್ತು ಬೇರೂರಿದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅನುಸರಿಸಿದರೆ, ಭಾರತವು ವೇಗವಾಗಿ ಬೆಳೆಯುತ್ತದೆ ಎಂದು ಅವರು ಹೇಳಿದರು.