ಮಂಗಳೂರು: ನಗರದ ಮರೋಳಿಯಲ್ಲಿ ಹೋಳಿ ಸಂಭ್ರಮದ ಡಿಜೆ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಬಜರಂಗದಳ ಕಾರ್ಯಕರ್ತರು ದಾಂಧಲೆ ನಡೆಸಿದ ಘಟನೆ ನಡೆದಿದೆ. ‘ರಂಗ್ ದೇ ಬರ್ಸಾ’ ಎಂಬ ಹೆಸರಿನಲ್ಲಿ ಹೋಳಿ ಆಚರಣೆ ನಡೆಯುತ್ತಿತ್ತು. ಈ ವೇಳೆ ಡಿಜೆ ಪಾರ್ಟಿಯೊಂದಿಗೆ ಯುವಕ-ಯುವತಿಯರು ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು.
ಆದ್ದರಿಂದ ಅಶ್ಲೀಲ ವರ್ತನೆ ಎಂದು ಆರೋಪಿಸಿ ಹೋಳಿ ಸಂಭ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಲ್ಲದೆ ಅನ್ಯಕೋಮಿನ ಯುವಕರೊಂದಿಗೆ ಹೋಳಿ ಆಚರಣೆ ಎಂದು ಆರೋಪಿಸಲಾಗಿದೆ. ಹೋಳಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದು ದಾಂಧಲೆ ನಡೆಸಲಾಗಿದೆ. ಈ ವೇಳೆ ಬಜರಂಗದಳ ಕಾರ್ಯಕರ್ತರು ಹಾಗೂ ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಯೋಜಕರು ಹಾಗೂ ಹಲವರ ಮೇಲೆ ಹಲ್ಲೆಗೂ ಯತ್ನಿಸಿದ ಘಟನೆ ನಡೆದಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಆರು ಮಂದಿ ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.