ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಏಪ್ರಿಲ್ 30ರವರೆಗೆ ಹೀಟ್ ವೇವ್ ಪ್ರಭಾವ ಇರಲಿದೆ.
ಪ್ರಮುಖವಾಗಿ ಉತ್ತರ ಒಳನಾಡಿ ಬೀದರ್, ಕಲಬುರಗಿ, ವಿಯಜಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಬಳ್ಳಾರಿ, ವಿಜಯನಗರ ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಜತೆಗೆ ಹೀಟ್ ವೇವ್ ಹೆಚ್ಚಾಗುವ ಸಾಧ್ಯತೆ ಇದೆ.
ಬಿಸಿ ಗಾಳಿ ಎಚ್ಚರಿಕೆ
ಏಪ್ರಿಲ್ 27 ರಿಂದ ಮೇ 1ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 23 ಡಿ.ಸೆ ಇರುವ ಸಾಧ್ಯತೆ ಇದೆ.
ಸೂರ್ಯನ ತಾಪವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇವರಿಸುವ ಸೂರ್ಯನ ಶಾಖವು ಜನರು ಆರೋಗ್ಯದ ಮೇಲೂ ಪರಿಣಾಮ (Health Tips) ಬೀರುತ್ತಿದೆ. ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬ ಮಾಹಿತಿ ಇಲ್ಲದೆ.
ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?
ಸಾಮಾನ್ಯವಾಗಿ ದೇಹದ ಉಷ್ಣತೆಯು 36.4 ಡಿ.ಸೆ ನಿಂದ 37.2 ಡಿ.ಸೆ ಇರಲಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು , ಊತಗಳು ( ಕೈ-ಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ), ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾಶ್ವವಾಯು ಉಂಟಾಗಲಿದೆ. ಕೆಲವೊಮ್ಮೆ ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು ಹಾಗೂ ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗಲಿದೆ.