ಸುಳ್ಯ: ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೊಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ. ಬುಧವಾರ ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಂದ ತೊಂದರೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು ಹೇಳಿದ್ದರು. ಬಸ್ ನಿಲ್ದಾಣದಲ್ಲಿದ್ದ ಆ ಕುಡುಕರು ಅಲ್ಲಿ ಬಾಟಲಿ ಒಡೆದು ಬಾಟಲಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿತ್ತು. ಕರೆಯ ಆಧಾರದಲ್ಲಿ ಸ್ಥಳಕ್ಕೆ ಹೊಯ್ಸಳ ಪೋಲಿಸರು ಬಂದಿದ್ದು, ಅವರು ಕುಡುಕರನ್ನು ಗದರಿಸದೆ ವಾಹನದೊಳಗೆ ಕುಳಿತಿರುವುದನ್ನು ಕಂಡ ಸಾರ್ವಜನಿಕರು ಅನುಮಾನಗೊಂಡರು. ಪೊಲೀಸರೇ ಕುಡಿದು ಬಂದಿದ್ದಾರೆಂದು ತಿಳಿದುಕೊಂಡ ಸಾರ್ವಜನಿಕರು ಮೊಬೈಲ್ ನಲ್ಲಿ ಪೋಲೀಸರ ಚಲನವಲನವನ್ನು ಸೆರೆಹಿಡಿದಿದ್ದಾರೆ. ಇನ್ನು ಕೆಲ ಮಂದಿ ನೇರವಾಗಿ ಪೋಲೀಸರನ್ನು ಈ ಬಗ್ಗೆ ಪ್ರಶ್ನಿಸಿ, ಅದನ್ನು ವೀಡಿಯೋ ಮಾಡಿಕೊಂಡರು. ಜೊತೆಗೆ ‘ಕುಡಿದು ವಾಹನ ಚಲಾಯಿಸಬೇಡಿ’ ಎಂದು ಪೊಲೀಸರಿಗೇ ಬುದ್ದಿ ಹೇಳುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಟ್ಟಾರೆ ಸಮಾಜವನ್ನು ರಕ್ಷಣೆ ಮಾಡಬೇಕಾದ ಪೊಲೀಸರ ಈ ರೀತಿಯ ವರ್ತನೆಯಿಂದ ಸಾರ್ವಜನಿಕರು ಕಂಗಾಲಾಗಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪೊಲೀಸರು ಈ ಹಿಂದೆಯೂ ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸುತ್ತಾರೆ ಎಂಬ ಆರೋಪಗಳು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.