ಬೆಂಗಳೂರು: ಜನರ ಆರೋಗ್ಯ ಮೇಲೆ ಪರಿಣಾಮ ಬೀರುವಂತ ಹುಕ್ಕಾಬಾರ್ ಗಳನ್ನು ರಾಜ್ಯಾಧ್ಯಂತ ನಿಷೇಧಿಸೋ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ನಿಷೇಧ ಆದೇಶವನ್ನು ಶೀಘ್ರವೇ ಜಾರಿಗೊಳಿಸೋದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ಈ ಕುರಿತಂತೆ ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಬಿ.ನಾಗೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು.
ಇಂತಹ ಸಭೆಯಲ್ಲಿ ರಾಜ್ಯಾಧ್ಯಂತ ಹುಕ್ಕಾಬಾರ್ ನಿಷೇಧಿಸೋ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದ ಯುವಜನತೆ ಹಾಗೂ ಮಕ್ಕಳ ಮೇಲೆ ದಿನೇ ದಿನೇ ಹುಕ್ಕಾಬಾರ್ ಗಳು ವ್ಯಾಪಕವಾಗಿ ಪರಿಣಾಮ ಬೀರುತ್ತಿದ್ದಾವೆ. ಇಂತಹ ಆರೋಗ್ಯಕ್ಕೆ ಮಾರಕವಾಗುವಂತ ಹುಕ್ಕಾಬಾರ್ ಗಳನ್ನು ರಾಜ್ಯದಲ್ಲಿ ಶಾಶ್ವತವಾಗಿ ಕಡಿವಾಣ ಹಾಕೋ ನಿಟ್ಟಿನಲ್ಲಿ ನಿಷೇಧಿಸೋ ನಿರ್ಧಾರ ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸೋದಕ್ಕೆ ಅಧಿಕಾರಿಗಳಿಂದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈವರೆಗೆ ಹುಕ್ಕಾಬಾರ್ ನಿಷೇಧ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೇ ನಾವು ನಿಯಂತ್ರಣ ಮಾಡೋದಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ನಾವು ಕಾನೂನಿನ ಮೂಲಕವೇ ನಿಯಂತ್ರಣ ಕ್ರಮ ಜಾರಿಗೊಳಿಸಲಿದ್ದೇವೆ. ಇದನ್ನ ನಿಷೇಧಿಸೋದಕ್ಕೆ ವಿರೋಧ ಇಲ್ಲದೇ ಇದ್ದರೂ, ಕೆಲವರು ನಾವು ಕಾನೂನು ಜಾರಿಗೆ ತಂದ ಬಳಿಕ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಹೊಸ ಮಸೂದೆಯನ್ನು ತಂದು, ಆ ಮೂಲಕ ಹುಕ್ಕಾಬಾರ್ ಗಳನ್ನು ರಾಜ್ಯಾಧ್ಯಂತ ನಿಷೇಧ ಮಾಡುತ್ತಿರುವುದಾಗಿ ತಿಳಿಸಿದರು.