ಕಾಸರಗೋಡು: ಮಂಗಳೂರಿನಲ್ಲಿ ಕುಕ್ಕರ್ ಪ್ರಕರಣದ ಆರೋಪಿ ಶಾರೀಕ್ ಕೊಚ್ಚಿಯಲ್ಲಿ ವಿದೇಶಿಗ ಸಹಿತ ನಾಲ್ವರ ಸಂಪರ್ಕದಲ್ಲಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಅವರ ಗುರುತು ಪತ್ತೆಹಚ್ಚಿದ್ದು ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ.
ಸ್ಫೋಟದ ಮುನ್ನ ಕೊಚ್ಚಿಗೆ ಹೋಗಿದ್ದು, ಅಲ್ಲಿ ವ್ಯವಹಾರ ನಡೆಸಿದವರ ಪೈಕಿ ನಾಲ್ವರ ಮಾಹಿತಿ ಲಭಿಸಿದೆ. ಇವರಲ್ಲಿ ಓರ್ವ ವಿದೇಶಿಗ, ಇಬ್ಬರು ಕೇರಳೀಯರು ಮತ್ತು ತಮಿಳುನಾಡು ನಿವಾಸಿಯಾಗಿದ್ದಾನೆ. ಇವರ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸ ಲಾಗಿದ್ದರೂ ಕರ್ನಾಟಕ ವಿಶೇಷ ತನಿಖಾ ತಂಡ ಈಗಲೂ ತನಿಖೆಯನ್ನು ಮುಂದುವರಿಸುತ್ತಿದೆ. ಕೇರಳದಲ್ಲಿ ನಡೆಸುತ್ತಿರುವ ತನಿಖೆಗೆ ಕೇರಳ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ತನಿಖಾತಂಡ ಕಳೆದ 2 ವಾರಗಳಿಂದ ಕೊಚ್ಚಿಯಲ್ಲೇ ಠಿಕಾಣಿ ಹೂಡಿದ್ದು, ಅಗತ್ಯದ ಪುರಾವೆ, ಮಾಹಿತಿ ಗಳನ್ನು ಕಲೆ ಹಾಕುತ್ತಿದೆ.
ತನಿಖಾ ತಂಡಕ್ಕೆ ಕೇರಳ ಪೊಲೀಸ್ ವಿಭಾಗಗಳ ಓರ್ವ ಡಿವೈಎಸ್‌ಪಿ ಮತ್ತು ಇಬ್ಬರು ಎಸ್‌ಐಗಳು ನೆರವು ಹಾಗೂ ಸಹಕಾರ ನೀಡುತ್ತಿದ್ದಾರೆ. ಶಾರೀಕ್ ಸಂಪರ್ಕ ದಲ್ಲಿದ್ದವರ ಪೈಕಿ ಕೇರಳೀಯರಾದ ಇಬ್ಬರು ದೀರ್ಘ ಕಾಲದಿಂದ ವಿದೇಶ ದಲ್ಲಿದ್ದಾರೆ. ಅವರ ಸಂಬಂಧಿಕರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಇಬ್ಬರ ಜತೆ ತಮಿಳುನಾಡುನಿವಾಸಿಯೂ ವಿದೇಶದಲ್ಲಿ ದುಡಿದಿದ್ದರು. ಆದರೆ ಶಾರೀಕ್‌ಗೆ ಪರಿಚಿತನಾದ ವಿದೇಶಿ ವ್ಯಕ್ತಿಯ ಕುರಿತು ಸ್ಪಷ್ಟ ಚಿತ್ರಣ ಇನ್ನೂ ಲಭಿಸಿಲ್ಲ. ಕೊಚ್ಚಿಯಲ್ಲಿ ಶಾರೀಕ್ ನಡೆಸಿದ ಡ್ರಗ್ಸ್, ಚಿನ್ನ ಸಾಗಾಟ ಹಾಗು ಕಾಳಧನ ವ್ಯವಹಾರಗಳು ದೇಶದ್ರೋಹಿ ಪ್ರಕರಣಗಳಾಗಿವೆ ಎಂಬುದು ತನಿಖಾ ತಂಡದ ಪ್ರಾಥಮಿಕ ಅಭಿಪ್ರಾಯವಾಗಿದೆ. ಉಗ್ರಗಾಮಿ, ವಿಧ್ವಂಸಕ ಕೃತ್ಯ ಇತ್ಯಾದಿ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಕೇರಳ ಸಂದರ್ಶಿಸಿದ್ದನೆಂದು ತನಿಖಾ ತಂಡಕ್ಕೆ ಮನವರಿಕೆಯಾಗಿದೆ.