ಮಂಗಳೂರು: ಇಲ್ಲಿನ ಮುತ್ತೂರು ಗ್ರಾಮದ ಫಲ್ಗುಣಿ ನದಿ ತೂಗು ಸೇತುವೆ ಬಳಿಯ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ಭೂ ವಿಜ್ಞಾನಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಾಹಿತಿಯನ್ವಯ ಅ.23ರಂದು ರಾತ್ರಿ 9:55ಕ್ಕೆ ಸ್ಥಳಕ್ಕೆ ಭೂ ವಿಜ್ಞಾನಿ ಗಿರೀಶ್ ಮೋಹನ್, ಕಂದಾಯ ಇಲಾಖೆಯ ಗ್ರಾಮ ಕರಣಿಕ ರಾಜೇಶ್ ಕುಮಾರ್ ಕೆ ಮತ್ತು ಚಾಲಕ ಎ.ಎಸ್. ಕೇಶವಮೂರ್ತಿ ವಾಹನದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸ್ಥಳ ಪರಿಶೀಲನೆಯ ವೇಳೆ ನದಿ ಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 208 ಮೆಟ್ರಿಕ್ ಟನ್ (ಅಂದಾಜು ಮೌಲ್ಯ 1,45,600 ರೂ.) ಸಾಮಾನ್ಯ ಮರಳು ಪತ್ತೆಯಾಗಿದೆ. ಪರಿಶೀಲನೆ ಸಂದರ್ಭದಲ್ಲಿ, ಅಕ್ರಮ ಚಟುವಟಿಕೆ ನಡೆಸುತ್ತಿದ್ದವರು ಸ್ಥಳದಲ್ಲಿಲ್ಲದಿದ್ದರೂ, ನದಿ ಪಾತ್ರದಲ್ಲಿ ಮರಳುಗಾರಿಕೆ ನಡೆಸಲು ಸ್ಥಳಿಯರು ರಸ್ತೆ ನಿರ್ಮಿಸಿದ್ದು ಕಂಡುಬಂದಿದೆ. ಈ ಸ್ಥಳದ ಮಾಲಕರು ಜಾರಪ್ಪ ಮೂಲ್ಯ, ತಿಮ್ಮಪ್ಪ ಮೂಲ್ಯ, ಕಮಲ, ಮಾರಪ್ಪ ಮೂಲ್ಯ ಮತ್ತು ಧರ್ಣಪ್ಪ ಮೂಲ್ಯ ಎಂಬವರಿಗೆ ಸೇರಿದ್ದಾಗಿದೆ. ಅವರು ಈ ಭೂಮಿ ತಮಗೆ ಸೇರಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಮರಳುಗಾರಿಕೆ ನಡೆಸುತ್ತಿರುವವರ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಿರ್ದಿಷ್ಟ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.