ಕಡಬ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳ ಸಹಿತ ಲಾರಿಯನ್ನು ಅರಣ್ಯ ಇಲಾಖಾಧಿಕಾರಿಗಳ ತಂಡ ಸೋಮವಾರ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ

ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳ ತಂಡ ಕಡಬ ತಾಲೂಕು ಅಲಂಕಾರು ಪರಿಸರದ ಕಾಡಿನಿಂದ ಕಡಿದು ಬಿ.ಸಿ. ರೋಡ್ ಪರಿಸರದತ್ತ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಹೊತ್ತು ಸಾಗಿಸುತ್ತಿದ್ದ ಲಾರಿಯನ್ನು ಸುಬ್ರಹ್ಮಣ್ಯ ಕ್ರಾಸ್ ಬಳಿ ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪಾಣೆಮಂಗಳೂರು ನಿವಾಸಿ ಮಹಮ್ಮದ್ ಅಶ್ರಫ್ ಬಂಧಿತ. 1.09 ಲಕ್ಷ ರೂ. ಮೌಲ್ಯದ ಮರದ ದಿಮ್ಮಿಗಳನ್ನು ಹಾಗೂ 6 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪ ವಲಯ ಅರಣ್ಯಾಧಿಕಾರಿ ಜೆರಾಲ್ಡ್ ಡಿಸೋಜಾ, ಅರಣ್ಯ ಪಾಲಕರಾದ ಜಗದೀಶ್, ವಿನಯಚಂದ್ರ, ಅರಣ್ಯ ವೀಕ್ಷಕರಾದ ಕಿರಣ್, ರವಿ, ಕಿಶೋರ್ ಭಾಗವಹಿಸಿದ್ದರು. ಪ್ರಕರಣದ ಬಗ್ಗೆ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ.