ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಓರ್ವ ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನವು ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಕ್ರೈಂ ನಂ 32/1970 ರಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ನಿವಾಸಿ, ಪ್ರಸ್ತುತ 78 ವರ್ಷದ ಚಂದ್ರನ್ ಎಂಬಾತ 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಎಲ್‌ಪಿಸಿ (LPC: 2/1972) ವಾರಂಟ್ ಜಾರಿಯಾಗಿತ್ತು.
ಪೊಲೀಸರು ನಡೆಸಿದ ನಿರಂತರ ಶೋಧ ಕಾರ್ಯಾಚರಣೆಯ ನಂತರ ಕೇರಳದ ಕ್ಯಾಲಿಕಟ್‌ನ ಪುಲ್ಲಿಕಲ್ ಎಂಬಲ್ಲಿ ತಲೆಮರೆಸಿಕೊಂಡಿದ್ದ ಚಂದ್ರನ್‌ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಷ್ಟು ಹಳೆಯ ಪ್ರಕರಣವನ್ನು ಭೇದಿಸಿದ್ದು ಅಪರೂಪದ ಘಟನೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಮಾಹಿತಿಗಳನ್ನು ಆಧರಿಸಿ ಹಾಗೂ ತಾಂತ್ರಿಕ ನೆರವು ಪಡೆದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.




