ಪುತ್ತೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ‘ಭಾರತೀಯ ಸೇನೆ’ ಎಂಬ ಹೆಸರಿನ ಫೇಸ್‌ಬುಕ್ ಪುಟದ ನಿರ್ವಾಹಕನ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಗುರುವಾರ (ಆ. 10) ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಭಾರತೀಯ ಸೇನೆ’ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಧರ್ಮಗಳು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ, ಕೋಮು ಸೌಹಾರ್ದವನ್ನು ಕದಡುವ ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವಂತಹ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಪೋಸ್ಟ್‌ಗಳು ಸಮಾಜದ ಶಾಂತಿಗೆ ಭಂಗ ತರುತ್ತಿರುವುದನ್ನು ಗಮನಿಸಿದ ಪೊಲೀಸರು, ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 70/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(1)(ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353(2) (ಸಾರ್ವಜನಿಕ ಶಾಂತಿ ಕದಡುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು. ಫೇಸ್‌ಬುಕ್ ಪುಟದ ನಿರ್ವಾಹಕನನ್ನು ಪತ್ತೆಹಚ್ಚಿ. ಬಂಧಿಸಲು ಬಲೆ ಬೀಸಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.



