ಬಂಟ್ವಾಳ: ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ತಂಡವು ಮಾ. 5ರಂದು ನಂದಾವರದ ನಾಲ್ಕೈದು ಮನೆಗಳಿಗೆ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದು ತಡರಾತ್ರಿಯ ವರೆಗೂ ತೀವ್ರ ಸ್ವರೂಪದ ತನಿಖೆ ನಡೆಸಿ, ನಗದು ಸಹಿತ ಕೆಲವು ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಬಿಹಾರದ ಪಟ್ನಾದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಬಾಂಬ್ ಇರಿ ಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತ ರಾಗಿರು ವವರಿಗೆ ಹಣಕಾಸಿನ ನೆರವು ಒದಗಿಸಿದ್ದಾರೆ ಎಂಬ ಆರೋಪದಲ್ಲಿ ಈ ದಾಳಿ ನಡೆದಿದ್ದು, ನಂದಾವರದ ಒಬ್ಟಾತ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾನೆ. ಉಳಿದವರು ಆತನಿಗೆ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಂದಾವರ ಭಾಗಕ್ಕೆ ಸಂಜೆಯ ವೇಳೆಗೆ ಪೊಲೀಸ್ ವಾಹನಗಳು ತೆರಳಿದ್ದವಾದರೂ ಎನ್ಐಎ ಅಧಿಕಾರಿಗಳು ಆರೋಪಿಗಳನ್ನು ಅದಕ್ಕೂ ಮೊದಲೇ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ನಂದಾವರ ನಿವಾಸಿ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್, ನೌಫಲ್ನನ್ನು ವಶಕ್ಕೆ ಪಡೆದು ಬಂಟ್ವಾಳ ನಿರೀಕ್ಷಣ ಮಂದಿರದಲ್ಲಿ ತಡರಾತ್ರಿ 12ರ ವರೆಗೂ ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳನ್ನು ಅಧಿಕಾರಿಗಳು ತಮ್ಮ ವಶದಲ್ಲಿಯೇ ಇರಿಸಿಕೊಂಡಿದ್ದಾರೆಯೇ ಅಥವಾ ಮನೆಗೆ ಕಳು ಹಿಸಿ ದ್ದಾರೆಯೇ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆರೋಪಿಗಳ ಮನೆಯಿಂದ 2 ಮೊಬೈಲ್, 2 ಡಿವಿಆರ್ ಹಾಗೂ 1.50 ಲಕ್ಷ ರೂ. ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ.
ಸೋಮವಾರ ಬೆಳಗ್ಗೆ ಬಿ.ಸಿ. ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕಚೇರಿಯ ಮುಂಭಾಗದಲ್ಲಿ 2 ಕೆಎಸ್ಆರ್ಪಿ ಬಸ್ಗಳು ನಿಂತಿದ್ದು, ಆರೋಪಿಗಳನ್ನು ಮಹಜರಿಗೆ ತಹಶೀಲ್ದಾರ್ ಬಳಿಗೆ ಕರೆದುಕೊಂಡು ಬರುವ ಸಂಶಯ ಹುಟ್ಟಿಕೊಂಡಿತ್ತು. ಆದರೆ ತಾಲೂಕು ಕಚೇರಿಗೆ ಯಾವುದೇ ಆರೋಪಿಯನ್ನು ಕರೆತರದೇ ಇರುವುದರಿಂದ ವಶಕ್ಕೆ ಪಡೆದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ರಿಯಾಜ್ ಫರಂಗಿಪೇಟೆ ವಿಚಾರಣೆ ನಡೆಸಿತ್ತು
2022ರ ಸೆ. 8ರಂದು ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎಸ್ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಅವರ ಬಿ.ಸಿ. ರೋಡಿನ ಪರ್ಲಿಯಾದಲ್ಲಿರುವ ಮನೆಗೆ ಎನ್ಐಎ ತಂಡ ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ಈ ವೇಳೆ ರಿಯಾಜ್ ಅವರನ್ನು ವಶಕ್ಕೆ ಪಡೆಯದೆ, ಮೊಬೈಲ್ ಫೋನ್ಗಳು ಹಾಗೂ ಪಕ್ಷಕ್ಕೆ ಸಂಬಂಧಿಸಿ ಕೆಲವು ಕರಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಪಕ್ಷದ ಬಿಹಾರ ಉಸ್ತುವಾರಿಯಾಗಿದ್ದ ವೇಳೆ ಬಿಹಾರ ಪ್ರಕರಣದ ಓರ್ವ ಬಂಧಿತ ಆರೋಪಿ ಅಥಾರ್ ಪರ್ವೇಜ್ನನ್ನು ಭೇಟಿಯಾಗಿದ್ದ ಹಿನ್ನೆಲೆ ಯಲ್ಲಿ ವಿಚಾರಣೆ ನಡೆಸಲಾಗಿತ್ತು. ಪರ್ವೇಜ್ ಎಸ್ಡಿಪಿಐ ಪಕ್ಷದ ಪಟ್ನಾ ಜಿಲ್ಲೆಯ ಪ್ರಧಾನ ಕಾರ್ಯ ದರ್ಶಿಯಾಗಿರುವುದರಿಂದ ಆತನನ್ನು ಭೇಟಿಯಾಗಿದ್ದೆ ಎಂದು ರಿಯಾಜ್ ಅಧಿಕಾರಿಗಳಿಗೆ ತಿಳಿಸಿದ್ದರು.
ಮತ್ತೆ ಈ ಪ್ರಕರಣ ಬಂಟ್ವಾಳದತ್ತ ಮುಖ ಮಾಡಿದ್ದು, ನಂದಾವರ ಆರೋಪಿಗಳು ಎಲ್ಲಿಂದ ಹಣ ವರ್ಗಾಯಿಸುತ್ತಿದ್ದರು, ಅವರಿಗೆ ಹಣಕಾಸಿನ ನೆರವು ಒದಗಿಸಿದವರು ಯಾರು ಎಂಬ ಸತ್ಯಾಂಶ ಹೊರಬೀಳಬೇಕಿದೆ.