ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಕನ್ನಡ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡು, ಹಾಡಿಹೊಗಳಿದ ಬಳಿಕ ಬೇರೆ ಬೇರೆ ಭಾಷೆಯ ಪ್ರೇಕ್ಷರಿಂದ ಬೇಡಿಕೆ ಹೆಚ್ಚಾಯಿತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲಾ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಭರ್ಜರಿ ಕಲೆಕ್ಷನ್ ಕೂಡ ಆಯಿತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ. ‘ಈ ವಿಷಯ ತಿಳಿಸಲು ನಮಗೆ ತುಂಬಾ ಖುಷಿಯಾಗಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ’ ಎಂದು ಇಟಾಲಿಯನ್ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಬಹಿರಂಗ ಪಡಿಸುತ್ತಿದ್ದಂತೆ ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಇತ್ತೀಚೆಗಷ್ಟೆ ರಿಷಬ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಜೆನಿವಾದಲ್ಲೂ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿತ್ತು. ಈ ಮೂಲಕ ರಿಷಬ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಉಳಿದಂತೆ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದರು.