ಶ್ರೀನಗರ: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಶಸ್ತ್ರಧಾರಿ ಭಯೋತ್ಪಾದಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಇಬ್ಬರನ್ನೂ ಪೊಲೀಸರು ಇದೀಗ ಬಂಧಿಸಿದ್ದಾರೆ. ಈ ಪೈಕಿ ರಜೌರಿ ಜಿಲ್ಲೆಯ ನಿವಾಸಿ ತಲಿಬ್ ಹುಸೇನ್ ಎಲ್‌ಇಟಿ ಸಂಘಟನೆಯ ಕಮಾಂಡರ್ ಆಗಿದ್ದಾನೆ. ಅಲ್ಲದೆ ಈತನನ್ನು ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಶೋಧ ನಡೆಸುತ್ತಿದ್ದರು.
ಅಲ್ಲದೆ ಜಿಲ್ಲೆಯಲ್ಲಿ ಐಇಡಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಫೈಜಲ್ ಅಹ್ಮದ್ ದರ್ ನ್ನು ತುಕ್ಸಾನ್ ಗ್ರಾಮದಲ್ಲಿ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ.
ಎರಡು ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್ ಗಳು, ಒಂದು ಪಿಸ್ತೂಲ್‌ನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಉಗ್ರರನ್ನು ಹಿಡಿದುಕೊಟ್ಟ ಗ್ರಾಮಸ್ಥರ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ಡಿಜಿಪಿ ದಲ್ಬಿರ್ ಸಿಂಗ್ ಅವರು 2 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.