ಮಂಗಳೂರು: ಕಾಲಿಯ ರಫೀಕ್ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ನಿರಾಪರಾಧಿ ಎಂದು ಘೋಷಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶ ಮಲ್ಲಿಕಾರ್ಜುನ ಸ್ವಾಮಿ ಆದೇಶಿಸಿದ್ದಾರೆ. 2017 ಫೆ.14ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್‌ನಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗ ಕಾಲಿಯ ರಫೀಕ್ ಮತ್ತು ಆತನ ಸ್ನೇಹಿತರು ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆಸಿದ್ದರು. ಈ ಸಂದರ್ಭ ಪೆಟ್ರೋಲ್ ಬಂಕ್ ಕಡೆಗೆ ಓಡಿದ್ದ ಕಾಲಿಯ ರಫೀಕ್‌ನನ್ನು ಆರೋಪಿಗಳು ಬೆನ್ನಟ್ಟಿಕೊಂಡು ಹೋಗಿ ಗುಂಡು ಹಾರಿಸಿ ಹಾಗೂ ತಲವಾರಿನಿಂದ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆಗೈದಿದ್ದರು. ಈ ಪ್ರಕರಣದಲ್ಲಿ 9ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ಅಂದಿನ ತನಿಖಾಧಿಕಾರಿ ಉಳ್ಳಾಲ ಠಾಣಾ ಪೋಲಿಸ್ ನಿರೀಕ್ಷಕ ಕೆ.ಆರ್.ಗೋಪಿಕೃಷ್ಣ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಕೊಲೆಗೆ ಕೇರಳ ರಾಜ್ಯದ ಮಂಜೇಶ್ವರದ ಹಿದಾಯತ್ ನಗರದ ಕ್ಲಬ್‌ನಲ್ಲಿ ಸಂಚಯ ರೂಪಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಆರೋಪ ಸಾಬೀತಿಗೆ 31ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, 68 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ವಾದ-ವಿವಾದಗಳನ್ನು ಆಲಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶ ಮಲ್ಲಿಕಾರ್ಜುನಸ್ವಾಮಿಯವರು ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಿಸಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳಿದ್ದು, ಇದರಲ್ಲಿ ಓರ್ವನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಆತನ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ವೈ. ವಿಕ್ರಮ್ ಹೆಗ್ಡೆ, ರಾಜೇಶ್ ಕೆ.ಜಿ. ಹಾಗೂ ಅಬ್ದುಲ್ ಅಜೀಜ್ ಬಾಯರ್ ವಾದಿಸಿದ್ದರು.