ಪುತ್ತೂರು: ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಸಾರಥ್ಯ ವಹಿಸಿದ್ಧ ಅಕ್ಷಯ್ ಕಲ್ಲೇಗ(24) ಅವರನ್ನು ನೆಹರೂ ನಗರದಲ್ಲಿ ನ.6ರ ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ.
ಅಕ್ಷಯ್ ಕಲ್ಲೇಗ ಕಳೆದ 6 ವರ್ಷಗಳಿಂದ ಇವರು ಟೈಗರ್ಸ್ ಕಲ್ಲೇಗ ಎಂಬ ಹುಲಿ ವೇಷ ತಂಡವನ್ನು ಮುನ್ನಡೆಸುತ್ತಿದ್ದರು. ಈ ತಂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.
ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಅಕ್ಷಯ್ ನನ್ನು ಹತ್ಯೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಕ್ಷಯ್ ನನ್ನು ದುಷ್ಕರ್ಮಿಗಳ ತಂಡ ನೆಹರೂ ನಗರಕ್ಕೆ ಬರಲು ಹೇಳಿ ಬಳಿಕ ಅಟ್ಟಾಡಿಸಿಕೊಂಡು ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಅಕ್ಷಯ್ ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.