ಅಂಗಡಿ ಹೋಟೆಲ್ ಗಳಲ್ಲಿ ಕುರುಕಲು ತಿಂಡಿಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಇಂದಿನ ದಿನದಲ್ಲಿ ಮನೆಯಲ್ಲಿಯೇ ಆರೋಗ್ಯಕರ ಅಡುಗೆ ತಯಾರಿಸುವುದು ಸೂಕ್ತ.
ಅದರಲ್ಲಿಯೂ ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವಂತಹ ಅಡುಗೆ ಮಾಡುವುದು ಅರೋಗ್ಯಕ್ಕೂ ಹಿತಕರ. ಅಂತಹ ರುಚಿಕರ ಹಾಗೂ ಶಕ್ತಿಯುತ ತಿಂಡಿಯೆಂದರೆ ಹೆಸರುಕಾಳು ಚಪಾತಿ.
ಬೇಕಾಗುವ ಸಾಮಗ್ರಿ:
ಹೆಸರುಕಾಳು – 1 ಕಪ್, ಗೋಧಿಹಿಟ್ಟು – 2 ಕಪ್, ಎಣ್ಣೆ ಬೇಕಾಗುವಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ – ಅರ್ಧ ಚಮಚ
ತಯಾರಿಸುವ ಬಗೆ:
ಚಪಾತಿ ತಯಾರಿಸುವ 24 ಗಂಟೆ ಮೊದಲು ಹೆಸರುಕಾಳನ್ನು ನೀರಿನಲ್ಲಿ ನೆನೆಸಿಡಬೇಕು. ನಂತರ ಮೃದುವಾದ ಈ ಹೆಸರುಕಾಳನ್ನು ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಂಡು ಮಿಕ್ಸಿಗೆ ಹಾಕಿ ರುಬ್ಬಬೇಕು. ನಂತರ ಗೋಧಿಹಿಟ್ಟು, ಉಪ್ಪು ಮತ್ತು ಜೀರಿಗೆ ಪುಡಿಯೊಂದಿಗೆ ಚಪಾತಿ ಹಿಟ್ಟಿನಂತೆ ಕಲಸಿ, ಚಪಾತಿ ಮಾಡಿ ಸರಿಯಾಗಿ ಬೇಯಿಸಿದರೆ ಹೆಸರುಕಾಳಿನ ಚಪಾತಿ ತಿನ್ನಲು ಸಿದ್ದ.