ಜಾನಪದ ಕ್ರೀಡೆ ಕಂಬಳ ನಡೆಸಲು ಬಜೆಟ್‌ನಲ್ಲಿ 2 ಕೋಟಿ ರೂಪಾಯಿ ಅನುದಾನ ಮೀಸಲಿರಿಸುವಂತೆ ರಾಜ್ಯ ಕಂಬಳ ಅಸೋಸಿಯೇಷನ್ ಮುಖ್ಯಮಂತ್ರಿಗೆ ಮನವಿ ಮಾಡಿದೆ ಎಂದು ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ.ಐಕಳಬಾವ ದೇವೀಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಈ ಮೊತ್ತ ಮೀಸಲಿರಿಸಿ ಕಂಬಳ ಆಯೋಜಕರಿಗೆ ಒದಗಿಸಿದರೆ ಕಂಬಳಕ್ಕೆ ಪೂರಕ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಈ ಹಿಂದೆ ಒಂದು ಕಂಬಳ ನಡೆಸಲು 5 ಲಕ್ಷ ರೂಪಾಯಿ ನೀಡಲಾಗಿತ್ತು.
ಈ ಬಾರಿ 2 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದೆ. 2 ಕೋಟಿ ರೂಪಾಯಿ ಮೀಸಲಿರಿಸಿದರೆ ಒಂದು ಕಂಬಳಕ್ಕೆ ತಲಾ 8 ಲಕ್ಷ ರೂಪಾಯಿಯಂತೆ ಒಟ್ಟು 25 ಕಂಬಳಗಳಿಗೆ ಅನುದಾನ ನೀಡಲು ಸಾಧ್ಯವಾಗಲಿದೆ. ಈ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ, ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ರಾಜ್ಯ ಸರಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಶನ್‌ಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. ರಾಜ್ಯ ಕಂಬಳ ಅಸೋಸಿಯೇಶನ್‌ಗೆ ಜಿಲ್ಲಾಧಿಕಾರಿಯಿಂದ ಅನುಮೋದನೆಗೊಂಡ ಪದಾಧಿಕಾರಿಗಳ ಪಟ್ಟಿಗೆ ಮಾನ್ಯತೆ ದೊರಕಿದೆ. ಮುಂದಿನ ಮೂರು ವರ್ಷದ ಅವಧಿಗೆ ಅಧಿಕಾರಾವಧಿ ಇರಲಿದೆ ಎಂದವರು ಹೇಳಿದರು.
ಕಂಬಳ ಸಮಿತಿಯು ಮುಂದಿನ ವಾರ ಮಂಗಳೂರಲ್ಲಿ ಸಭೆ ಸೇರಲಿದೆ. ಮುಂದಿನ ದಿನಗಳಲ್ಲಿ ಕಂಬಳ ನಡೆಸುವ ಕುರಿತಂತೆ ರೂಪುರೇಷೆಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಕಂಬಳವನ್ನು ಐಪಿಎಲ್ ಮಾದರಿ ಪ್ರಾಯೋಜಕತ್ವದಲ್ಲಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.ರಾಜ್ಯ ಕಂಬಳ ಆಯೋಜಕರಿಗೆ ಸಹಕಾರ, ಪ್ರತಿ ಕಂಬಳಗಳು ಕ್ರೀಡಾ ಪ್ರಾಧಿಕಾರದ ಲಾಂಛನದ ಅಡಿಯಲ್ಲಿ ನಡೆಯುವುದು, ಕಂಬಳವನ್ನು ನಿಗದಿತ ವೇಳೆಯಲ್ಲಿ ನಡೆಸುವುದು.
ಕಂಬಳ ಓಟಗಾರರಿಗೆ, ತೀರ್ಪುಗಾರರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಭತ್ಯೆ ಮತ್ತು ಆರೋಗ್ಯ ವಿಮೆ ಒದಗಿಸುವುದು, ಕಂಬಳದ ಅಧಿಕೃತ ಧ್ವಜ ಮತ್ತು ಲಾಂಛನ ರಚನೆ. ಕಂಬಳ ಆಯೋಜಕರು ನಡೆಸುವ ಕಂಬಳಕ್ಕೆ ಅಸೋಸಿಯೇಷನ್ ಮೂಲಕವೇ ಅನುಮತಿ ಪಡೆಯುವುದು. ಇದರ ಮೂಲಕವೇ ಸರ್ಕಾರದ ಅನುದಾನ ಹಂಚಿಕೆ ಮಾಡುವುದು.
ಕಂಬಳದ ಬೈಲಾ, ನೀತಿ, ನಿಯಮಗಳನ್ನು ಕಾಲಕಾಲಕ್ಕೆ ತಕ್ಕಂತೆ ರೂಪಿಸುವ ಜವಾಬ್ದಾರಿ ರಾಜ್ಯ ಕಂಬಳ ಅಸೋಸಿಯೇಷನ್‌ನದ್ದು. ಈಗಾಗಲೇ ಬೈಲಾ ರಚನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ವಾರ್ಷಿಕ ಮಹಾಸಭೆ, ಆಡಿಟ್ ಕ್ಯಾಲೆಂಡರ್ ಆಫ್ ಈವೆಂಟ್ ಮತ್ತು ಅಸೋಸಿಯೇಷನ್ ಕಾರ್ಯ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಯೋಜನೆಯನ್ನು ಹೊಂದಲಾಗಿದೆ ಎಂದವರು ಹೇಳಿದರು. ಈ ವೇಳೆ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಇದ್ದರು.




