ಮಳೆಗಾಲ ಬಂತೆಂದರೆ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು.
ಬೇಕಾಗುವ ಸಾಮಗ್ರಿ :
10-15 ಕೆಸುವಿನ ಸೊಪ್ಪು, ಬೆಳ್ಳುಳ್ಳಿ, ಓಮು, ಉಪ್ಪು, ಹುಳಿಗೆ ಅಮಟೆಕಾಯಿ, ಹಸಿಮೆಣಸು
ಮಾಡುವ ವಿಧಾನ :
ಮೊದಲು ಕೆಸುವಿನ ಸೊಪ್ಪನ್ನು ತೊಳೆದು ಒಣಗಿಸಿಕೊಳ್ಳಿ. ಹಸಿ ಇರುವಾಗ ಕತ್ತರಿಸಿದರೆ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ನಂತರ ಸೊಪ್ಪನ್ನು ಉಪ್ಪು, ಅಮಟೆಕಾಯಿ, ಹಸಿಮೆಣಸಿನ ಪೇಸ್ಟ್ ಹಾಕಿ ಬೇಯಿಸಿ. ಅಮಟೆಕಾಯಿ ಲಭ್ಯವಿರದಿದ್ದಲ್ಲಿ ಲಿಂಬು ಕೂಡ ಬಳಸಬಹುದು.
ಕೆಸುವಿನ ಸೊಪ್ಪು ಚೆನ್ನಾಗಿ ಬೆಂದ ನಂತರ ಅದಕ್ಕೆ ಓಮು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿ. ಒಗ್ಗರಣೆಗೆ ಎಣ್ಣೆ ತುಸು ಜಾಸ್ತಿ ಇದ್ದಲ್ಲಿ ಕರಕಲಿಯ ರುಚಿ ಹೆಚ್ಚು.
ಬೇಸಿಗೆಯಲ್ಲಿ ಈ ಕರಕಲಿ ತಯಾರಿಸುವುದು ಒಳಿತಲ್ಲ. ಏಕೆಂದರೆ ಬೇಸಿಗೆಯಲ್ಲಿ ಇದನ್ನು ಸೇವಿಸಿದರೆ ಗಂಟಲಿನ ತುರಿಕೆ ಉಂಟಾಗುವ ಸಾಧ್ಯತೆ ಹೆಚ್ಚು.