ಮುಂಬಯಿ : ಮುಂಬಯಿಯ ಹೋಟೆಲ್ ಉದ್ಯಮಿಯೊಬ್ಬರು ಅಪಹರಣಕ್ಕೊಳಗಾದ ಘಟನೆ ಸೋಮವಾರ ಸಂಭವಿಸಿದೆ. ಅಪಹರಣಕ್ಕೊಳಗಾದ ಹೋಟೆಲ್ ಉದ್ಯಮಿ ಕರಾವಳಿ ಅನೂಪ್ ಶೆಟ್ಟಿ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನದ ವೇಳೆ ಅಂಧೇರಿ ಪೂರ್ವದ ಚಕಾಲದ ಸರ್ ಚಥುರ್‌ದಾಸ್ ವಾಸಂಜಿ ರಸ್ತೆಯಲ್ಲಿರುವ ಅವರ ವೀರ ರೆಸಿಡೆನ್ಸಿ ಹೋಟೆಲ್‌ಗೆ ಬಂದ ನಾಲ್ವರು ಏರ್‌ಗನ್ ತೋರಿಸಿ ಅನೂಪ್ ಶೆಟ್ಟಿಯವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಅನೂಪ್ ಶೆಟ್ಟಿಯವರನ್ನು ಮಂಗಳವಾರ ಮಧ್ಯಾಹ್ನ ಪಾರು ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.ಹಣಕಾಸಿನ ವ್ಯವಹಾರದ ತಗಾದೆಯ ಹಿನ್ನೆಲೆಯಲ್ಲಿ ಈ ಅಪಹರಣವಾಗಿದೆ. ಕೆಲ ಸಮಯ ಹೋಟೆಲ್ ವ್ಯವಹಾರದಲ್ಲಿ ಪಾಲುದಾರನಾಗಿದ್ದ ವ್ಯಕ್ತಿಯೇ ಹಣಕಾಸಿನ ವಿಚಾರದಲ್ಲಿ ತಗಾದೆ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಪಹರಣಕಾರರಲ್ಲಿ ಇಬ್ಬರು ವೈಟರ್‌ಗಳ ಸೋಗು ಹಾಕಿ ಬೆಳಗ್ಗೆ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ ಅನೂಪ್ ಶೆಟ್ಟಿಯವರ ಮಾಹಿತಿಯನ್ನು ರವಾನಿಸಿದ್ದರು. ಈ ಮೂವರಲ್ಲದೆ ಕಾರು ಚಾಲಕನನ್ನು ಪೊಲೀಸರು ಪಾಡ್ಗಾ ಎಂಬಲ್ಲಿಂದ ಬಂಧಿಸಿ ಅನೂಪ್ ಶೆಟ್ಟಿಯವರನ್ನು ಪಾರು ಮಾಡಿದ್ದಾರೆ. ಅಪಹರಿಸುವ ಮೊದಲು ಆರೋಪಿಗಳು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡು ಹೋಟೆಲ್ ಎದುರು ಬಿದ್ದಿತ್ತು. ಇದರಿಂದ ಅವರ ಬಳಿ ಇದ್ದದ್ದು ಏರ್‌ಗನ್ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಲೊಕೇಶನ್ ಟ್ರೇಸ್ ಮಾಡಿದಾಗ ಕಸಾರ ಘಾಟ್ ಸಮೀಪ ಪಾಡ್ಗಾ ಏರಿಯಾದಲ್ಲಿ ಅವರು ಇರುವುದು ಪತ್ತೆಯಾಗಿತ್ತು. ಬಾಕಿಯಿರುವ ಹಣ ಈಗಲೇ ಕೊಡಬೇಕೆಂದು ಹೇಳಿ ಶೆಟ್ಟಿವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು.ಹೋಟೆಲ್‌ಗೆ ಬಂದ ಪಾಲುದಾರ ಮೊದಲು ಅನೂಪ್ ಶೆಟ್ಟಿಯವರ ಜತೆ ಜಗಳವಾಡಿ ಬಳಿಕ ಬಂದೂಕು ತೋರಿಸಿ ಅವರನ್ನು ಕಾರಿಗೆ ಹತ್ತಿಸಿಕೊಂಡು ಹೋಗಿದ್ದಾರೆ. ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ ಕಾರಣ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದೆ. ಎಂಐಡಿಸಿ ಠಾನೆ ಪೊಲೀಸರು ಮತ್ತು ಕ್ರಂಬ್ರಾಂಚ್ ಪ್ರಕರಣದ ತನಿಖೆ ನಡೆಸುತ್ತಿದೆ.