ಉಳ್ಳಾಲ: ಕಳೆದ ತಿಂಗಳ 26ರಂದು ಉಳ್ಳಾಲ ಸೋಮೇಶ್ವರ ಕಡಲ ಕಿನಾರೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮುದ್ರದಲ್ಲಿ ಪತ್ತೆಯಾಗಿದೆ. ಆದರೆ ಮೂರು ದಿನಗಳ ಬಳಿಕ ಶವದ ಗುರುತು ಪತ್ತೆಯಾಗದೆ ಕೋಸ್ಟ್ ಗಾರ್ಡ್ ಪೊಲೀಸರು ಮೃತದೇಹವನ್ನ ಹೂತು ದಫನ ಮಾಡಿದ್ದು, ಮತ್ತೆ ಮೃತದೇಹವನ್ನ ಕುಟುಂಬಸ್ಥರು ವಶಕ್ಕೆ ಪಡೆಯೋ ಸಾಧ್ಯತೆಗಳಿವೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರು ದಾರಂದ ಬಾಗಿಲು ನಿವಾಸಿ ಝಾಕಿರ್ (36) ಯಾನೆ ಜಾಕಿ ಮೃತ ದುರ್ದೈವಿ. ಝಾಕಿರ್ ವಿವಾಹಿತನಾಗಿದ್ದು, ಈ ಹಿಂದೆ ಮಂಗಳೂರಿನ ಧಕ್ಕೆಯಲ್ಲಿ ಸಹೋದರರ ಜೊತೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದು, ವ್ಯವಹಾರದಲ್ಲಿ ಕೈ ಸುಟ್ಟು ಕೊಂಡಿದ್ದನೆನ್ನಲಾಗಿದೆ. ಝಾಕಿರ್ ಇತ್ತೀಚಿಗೆ ಖಿನ್ನತೆಗೊಳಗಾಗಿದ್ದು ಕಳೆದ ಸೆ.26 ರಂದು ಮನೆಯಿಂದ ಹೊರ ಹೋಗಿದ್ದವ ನಾಪತ್ತೆಯಾಗಿದ್ದ.ಝಾಕಿರ್ ಚಲಾಯಿಸುತ್ತಿದ್ದ ಮೋಟಾರ್ ಬೈಕ್ ಮೊನ್ನೆ ಶುಕ್ರವಾರ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರು ನಿನ್ನೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸುವಾಗ ಝಾಕಿರ್ ಮೃತ ದೇಹ ಕುಂಬ್ಳೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಕಳೆದ ಸೆ.28 ರಂದು ಕುಂಬ್ಳೆಯ ಆಳ ಸಮುದ್ರದಲ್ಲಿ ಝಾಕಿರ್ ಮೃತದೇಹ ಮೀನುಗಾರರಿಗೆ ದೊರಕಿದ್ದು ಕೋಸ್ಟ್ ಗಾರ್ಡ್ ಪೊಲೀಸರು ಕೇಸು ದಾಖಲಿಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಕೊಳೆತಿದ್ದ ಮೃತದೇಹದ ಗುರುತು ಪರಿಚಯ ಸಿಗದ ಕಾರಣ ಕೋಸ್ಟ್ ಗಾರ್ಡ್ ಪೊಲೀಸರು ಮೂರು ದಿವಸಗಳ ನಂತರ ಶವವನ್ನ ಹೂತು ದಫನಗೈದಿದ್ದಾರೆ.
ಝಾಕಿರ್ ಬೈಕ್ ಸೋಮೇಶ್ವರ ದೇವಸ್ಥಾನದ ಬಳಿ ದೊರಕಿದ್ದು ಆತ ಸಮುದ್ರಕ್ಕೆ ಹಾರಿ ಆತ್ಮ ಹತ್ಯೈಗೈದಿರುವ ಶಂಕೆ ವ್ಯಕ್ತವಾಗಿತ್ತು.ಕುಟುಂಬ ವರ್ಗದವರು ಮೃತ ಝಾಕಿರ್ ಮೃತದೇಹವನ್ನ ಮನೆಗೆ ತರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಮೃತ ಝಾಕಿರ್‌ಗೆ ಓರ್ವ ಪುತ್ರನಿದ್ದು, ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ.