ಕುಂದಾಪುರ: ಸರ್ಕಾರಿ ಇಲಾಖೆಗಳ 22ಕ್ಕೂ ಅಧಿಕ ನಕಲಿ ಸೀಲು ಬಳಸಿ ಸರ್ಕಾರಕ್ಕೂ, ಸಾರ್ವಜನಿಕರಿಗೂ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನ್ನು ನ್ಯಾಯಾಲಯದ ಆದೇಶದಂತೆ ಬಂಧಿಸಿ ನಕಲಿ ಸೀಲುಗಳನ್ನು ವಶಪಡಿಸಿಕೊಂಡು ಜೈಲಿಗಟ್ಟಿದ ಘಟನೆ ಕುಂದಾಪುರ ನಗರದ ಫೆರ್ರಿ ರಸ್ತೆಯಲ್ಲಿರುವ ಅರ್ಜಿ ಕೇಂದ್ರದಲ್ಲಿ ನಡೆದಿದೆ. ಕೋಡಿಯ ನಾಗೇಶ್ ಕಾಮತ್ ಎಂಬಾತನೇ ನಕಲಿ ಸೀಲ್ ಬಳಸಿ ವಂಚಿಸುತ್ತಿದ್ದ ಆರೋಪಿ.

ಆರೋಪಿ ನಾಗೇಶ್ ಅಕ್ರಮ ವ್ಯವಹಾರ ನಡೆಸುತ್ತಿರುವುದರ ಬಗ್ಗೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಶೋಧ ನಡೆಸಿ ಎನ್ನುವಂತೆ ನ್ಯಾಯಾಲಯ ಸರ್ಚ್ ವಾರಂಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕುಂದಾಫುರ ಸಬ್ ಇನ್ಸ್ ಪೆಕ್ಟರ್ ನಂಜಾ ನಾಯ್ಕ್ ತಂಡ ನಗರದ ಫೆರ್ರಿ ರಸ್ತೆಯಲ್ಲಿರುವ ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿತ್ತು. ದಾಳಿ ಸಂದರ್ಭ ಆರೋಪಿ ನಾಗೇಶ್ ಸ್ಥಳದಲ್ಲಿಯೇ ಇದ್ದು, ಆತನನ್ನು ಬಂಧಿಸಿದ್ದಾರೆ.ಬಳಿಕ ಶೋಧ ನಡೆಸಿದಾಗ ಜಿಲ್ಲಾಧಿಕಾರಿಗಳ ಕಛೇರಿ ಉಡುಪಿ ಜಿಲ್ಲೆ ರಜತಾದ್ರಿ ಮಣಿಪಾಲ ಎಂದಿರುವ ಕನ್ನಡದಲ್ಲಿ ತಯಾರಿಸಿದ ರೌಂಡ್ ಸೀಲು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ಬೈಂದೂರು ಉಪನೋಂದಣಾಧಿಕಾರಿಗಳ ರೌಂಡ್ ಸೀಲು ಸೇರಿದಂತೆ 22ಕ್ಕೂ ಅಧಿಕ ನಕಲಿ ಸೀಲುಗಳು ಪತ್ತೆಯಾಗಿವೆ.ಕನಕಲಿ ದಸ್ತಾವೇಜುಗಳಿಗೆ ಈ ನಕಲಿ ಸೀಲುಗಳನ್ನು ಬಳಸಿ ದಸ್ತಾವೇಜು ಸಿದ್ಧಪಡಿಸಿ ಸಾರ್ವಜನಿಕರಿಗೆ ಹಾಗೂ ಇಲಾಖೆಗಳಿಗೆ ವಂಚಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆ ಕುಂದಾಪುರದ ತಹಸೀಲ್ದಾರರಾಗಿದ್ದ ಗಾಯತ್ರಿ ನಾಯಕ್ ಅವರ ಮೊಹರನ್ನು ನಕಲಿಯಾಗಿ ಬಳಸಿ ಸಿಕ್ಕಿಬಿದ್ದಿದ್ದ. ಆದರೆ ಬಳಿಕ ಆತನಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಮತ್ತೆ ಪುನಃ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿ ನಾಗೇಶ್ ನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಈತನಿಂದ ಸಂತ್ರಸ್ಥರಾಗಿರುವ ಸಾರ್ವಜನಿಕರು ಆಗ್ರಹಿಸಿದ್ದಾರೆ.