ಮಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಇಬ್ಬರು ಕುಖ್ಯಾತ ದರೋಡೆಕೋರರ ಕಾಲಿಗೆ ಸಿಸಿಬಿ ಪೊಲೀಸರು ಗುಂಡಿಕ್ಕಿದ ಘಟನೆ ಹುಬ್ಬಳ್ಳಿ ಸಮೀಪ ಭಾನುವಾರ ಸಂಭವಿಸಿದೆ.ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಭರತ್ ಮತ್ತು ಫಾರೂಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ ಸಾಂಗ್ಲಿಯ ರಾಹುಲ್ ಸುರ್ವೆ ಎಂಬವರ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಫಾರೂಕ್‌ನನ್ನು ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಮಂಗಳೂರಿನಿಂದ ಬಂಧಿಸಿ ಕರೆದುಕೊಂಡು ಹೋಗಿದ್ದರು. ನವೆಂಬರ್ 8ರಂದು ಕಾರು ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆಯೊಡ್ಡಿ ಫಾರೂಕ್ ಹಾಗೂ ಭರತ್ ಗ್ಯಾಂಗ್ ದರೋಡೆ ಮಾಡಿತ್ತು.ಭಾನುವಾರ ಸ್ಥಳ ಮಹಜರು ಮಾಡುವ ವೇಳೆ ದರೋಡೆಕೋರರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ. ಅಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿದ್ದು, ಆರೋಪಿಗಳು ಗಾಯಗೊಂಡಿದ್ದಾರೆ. ಫಾರೂಕ್‌ಗೆ ಎರಡು ಗುಂಡುಗಳು ತಗುಲಿದ್ದರೆ. ಭರತ್‌ಕುಮಾರ್‌ಗೆ ಕಾಲಿಗೆ ಒಂದು ಗುಂಡೇಟು ಬಿದ್ದಿದೆ.ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.ಗ್ಯಾಂಗ್‌ನಲ್ಲಿ ಮಂಗಳೂರು ಮತ್ತು ಕಾಸರಗೋಡು ಪರಿಸರದ ಇನ್ನೂ ಕೆಲವರು ಇರುವ ಶಂಕೆಯಿದ್ದು, ಅವರ ಪತ್ತೆಗೆ ಕೇರಳಕ್ಕೆ ನಾಲ್ಕು ತಂಡಗಳನ್ನು ರವಾನಿಸಲಾಗಿದೆ. ಫಾರೂಕ್ ವಿರುದ್ಧ ಕೊಲೆ, ಡಕಾಯಿತಿ ಸೇರಿ 16 ಪ್ರಕರಣಗಳಿವೆ. ಭರತ್ ಕುಮಾರ್ ಮೂರು ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಗ್ಯಾಂಗ್ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.