ಬೆಂಗಳೂರು: ಡಿಜಿ ಆ್ಯಂಡ್ ಐಜಿಪಿ (DG and IGP) ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಗೃಹಮಂತ್ರಿ ಡಾ. ಜಿ. ಪರಮೇಶ್ವರ್ (G Parmeshwara) ಅವರ ಜೊತೆ ಸಭೆ ನಡೆಸಿದ ಬಳಿಕ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಿಜಿ ಆ್ಯಂಡ್ ಐಜಿಪಿ ಆಲೋಕ್ ಮೋಹನ್ (Alok Mohan) 20 ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಬೆಂಗಳೂರು ನಗರ ಸೇರಿದಂತೆ ಇತರೆ ನಗರಗಳ ಪೊಲೀಸ್ ಕಮಿಷನರೇಟ್ಗಳ ವ್ಯಾಪ್ತಿಗೆ ಬರುವ ಡೆಪ್ಯುಟಿ ಪೊಲೀಸ್ ಕಮೀಷನರ್ಗಳು ಪ್ರತಿದಿನ ಕನಿಷ್ಠ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಭೇಟಿಯ ಸಮಯದಲ್ಲಿ, ಅವರು ಪೊಲೀಸ್ ಠಾಣೆಗಳಲ್ಲಿರುವ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂವಹನ ನಡೆಸಬೇಕು ಮತ್ತು ಅವರ ಕುಂದುಕೊರತೆಗಳನ್ನು ಸಹ ಪರಿಶೀಲಿಸಬೇಕು.
ಎಲ್ಲ ವಲಯ ಐ.ಜಿ.ಪಿ.ಗಳು/ಡಿ.ಐ.ಜಿ.ಪಿ.ಗಳು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರದವರು ಪ್ರತಿನಿತ್ಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು. ಅವರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಠಾಣೆಯ ಕಾರ್ಯನಿರ್ವಹಣೆಯನ್ನು ಸಹ ಪರಿಶೀಲಿಸುವುದು ಮತ್ತು ಪೊಲೀಸರು ‘ನಾಗರಿಕ ಕೇಂದ್ರಿತ’ ವಿಧಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಡೆಪ್ಯುಟಿ ಪೊಲೀಸ್ ಕಮೀಷನರ್ಗಳು ಘೋರ ಮತ್ತು ಪ್ರಮುಖ ಅಪರಾಧಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಬೇಕು.
ಕ್ಲಬ್ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲ ಸಂಘಟಿತ ಅಪರಾಧಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.
ಪ್ರತಿ ತಿಂಗಳು, ಎಸ್.ಪಿ.ಗಳು, ಡಿ.ಸಿ.ಪಿ.ಗಳು ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಎಲ್ಲ ಘಟಕಗಳಲ್ಲಿನ ಎಲ್ಲ ಶ್ರೇಣಿಯ ಅಧಿಕಾರಿಗಳು ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಬೇಕು.
ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯದ ಪ್ರತಿಯೊಂದು ಪೊಲೀಸ್ ಘಟಕದಲ್ಲಿ ಪ್ರತಿದಿನವೂ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಮೇಲೆ ತೀವ್ರ ಕಾರ್ಯಾಚರಣೆ ನಡೆಸಬೇಕು.
ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ಇ-ಬೀಟ್ ಅಪ್ಲಿಕೇಶನ್ನ ಸಂಪೂರ್ಣ ನಿರ್ವಹಣೆಯನ್ನು ಅರಿತಿರಬೇಕು ಮತ್ತು ‘ಇ-ಬೀಟ್’ ಸೇವೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನ ಮಾಡಬೇಕು.
ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಗೋಚರತೆ ತೀರಾ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ 09.00 ರಿಂದ 11.00 ರವರೆಗೆ ಮತ್ತು ಸಂಜೆ 6.00 ರಿಂದ 09.00 ರವರೆಗೆ ಪೊಲೀಸ್ ಸಮವಸ್ತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಸಾರ್ವಜನಿಕರಿಗೆ ಕಾಣುವಂತೆ ಗಸ್ತು ಮಾಡಬೇಕು.
ಶಾಲಾ-ಕಾಲೇಜುಗಳನ್ನು ಪ್ರಾರಂಭವಾಗುವ ಮತ್ತು ಮುಚ್ಚುವ ಸಮಯದಲ್ಲಿ ಯಾವುದೇ ಈವ್-ಟೀಸಿಂಗ್ ನಡೆಯದಂತೆ ನೋಡಿಕೊಳ್ಳಬೇಕು ಮತ್ತು ಶಾಲೆಗಳು ಮತ್ತು ಕಾಲೇಜು ಕ್ಯಾಂಪಸ್ನ ಸುತ್ತಲೂ ಮಾದಕ ದ್ರವ್ಯಗಳು ಮತ್ತು ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ರೀತಿಯಲ್ಲಿ ಪೊಲೀಸ್ ಬೀಟ್ಗಳನ್ನು ನಿರ್ವಹಿಸಬೇಕು.
ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿದ ಎಲ್ಲ ದೂರುಗಳನ್ನು ಕಾನೂನು ಪ್ರಕಾರ ಸರಿಯಾದ ನಿಬಂಧನೆಗಳ ಅಡಿಯಲ್ಲಿ ದಾಖಲಿಸುವುದು ಮತ್ತು ಅಂತಹ ಎಲ್ಲ ದೂರುಗಳ ಮೇಲೆ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಘಟಕದ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಿಗೆ ‘ಡಿಕಾಯ್’ಗಳನ್ನು ಕಳುಹಿಸುವ ಮೂಲಕ ಅದನ್ನು ಖಚಿತಪಡಿಸಿಕೊಳ್ಳಬೇಕು.
ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಲಿಸುವ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದರಿಂದ ಗಂಭೀರವಾದ ರಸ್ತೆ ಅಪಘಾತಗಳು ವರದಿಯಾಗುತ್ತಿವೆ. ಇಂತಹ ಆಕಸ್ಮಿಕ ಜೀವಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ ಎಲ್ಲ ವಾಹನಗಳು ತಮ್ಮ ಪಾರ್ಕಿಂಗ್ ದೀಪಗಳನ್ನು ಆನ್ ಮಾಡಿರುವುದನ್ನು ಮತ್ತು ವಾಹನವನ್ನು ರಸ್ತೆಯಿಂದ ಸಾಕಷ್ಟು ದೂರದಲ್ಲಿ ನಿಲ್ಲಿಸಿರುವುದನ್ನು ಹೆದ್ದಾರಿ ಗಸ್ತು ತಿರುಗುವ ವಾಹನಗಳು ಖಚಿತಪಡಿಸಿಕೊಳ್ಳಬೇಕು.
ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮತ್ತು ನಕಲಿ ಸುದ್ದಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಹಾಗೂ ಅಗತ್ಯವಿರುವ ಪ್ರಕರಣಗಳಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು.
ಜಿಲ್ಲಾ ಮತ್ತು ನಗರ ಮಟ್ಟದ ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿ ಸಮಿತಿ ಸಭೆಗಳನ್ನು ಆಯೋಜಿಸಬೇಕು ಹಾಗೂ ಎಲ್ಲ ಸಮುದಾಯ ವರ್ಗ ಹಾಗೂ ಸಾಮಾಜಿಕ ವರ್ಗದವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು.
ಪಿ.ಎಸ್.ಐ. ಮಟ್ಟದಿಂದ ಎಸ್.ಪಿ./ಡಿ.ಸಿ.ಪಿ. ವರೆಗಿನ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ‘ಜನಸ್ಪಂದನ’/’ಜನಸಂಪರ್ಕ ಸಭೆಗಳನ್ನು ನಿರಂತರವಾಗಿ ನಡೆಸಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ನಿಯಮಿತವಾಗಿ ಪರಿಹರಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು.
ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ಹೆಣ್ಣುಮಕ್ಕಳು/ ಮಹಿಳೆಯರ ಪತ್ತೆ ಕಾರ್ಯಕ್ಕೆ ಅಗತ್ಯ ಚಾಲನೆ ನೀಡಬೇಕು.
ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಯಾವುದೇ ಸಂದರ್ಭದಲ್ಲಿ, ಕೆ.ಎಸ್.ಆರ್.ಪಿ. ಪ್ಲಟೂನ್ಗಳನ್ನು ನಿಯೋಜಿಸುವ ಮೊದಲು ಗರಿಷ್ಠ ಸಂಖ್ಯೆಯ ‘ಡಿ.ಎ.ಆರ್./ಸಿ.ಎ.ಆರ್ ಘಟಕದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆಯೇ ಎಂಬ ಬಗ್ಗೆ ಘಟಕಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
ಜಿಲ್ಲಾ ಎಸ್.ಪಿ.ಗಳು ತಮ್ಮ ವ್ಯಾಪ್ತಿಯಲ್ಲಿರುವ ಕೆ.ಎಸ್.ಆರ್.ಪಿ. ಮತ್ತು ತರಬೇತಿ ಸಂಸ್ಥೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು ಮತ್ತು ಅಲ್ಲಿನ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಶೀಲಿಸಬೇಕು. ಅದೇ ರೀತಿ, ಕೆ.ಎಸ್.ಆರ್.ಪಿ. ಕಮಾಂಡೆಂಟ್ಗಳು ಮತ್ತು ಪೊಲೀಸ್ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರುಗಳು ಅವರ ವ್ಯಾಪ್ತಿಗೆ ಬರುವ ಪೊಲೀಸ್ ಅಧೀಕ್ಷಕರು/ಪೊಲೀಸ್ ಆಯುಕ್ತರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಬೇಕು.
ನಿರ್ಮಾಣದ ಹಂತದ ಅಥವಾ ದುರಸ್ತಿಯಲ್ಲಿರುವ ಪೊಲೀಸ್ ಕಟ್ಟಡಗಳ ಸರಿಯಾದ ಗುಣಮಟ್ಟವನ್ನು ಮತ್ತು ಕಟ್ಟಡದ ಸಕಾಲಿಕ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಘಟಕಾಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಕಟ್ಟಡದ ಯೋಜನೆಯನ್ನು ಅನುಮೋದಿಸಿದ ನಂತರ ನಿರ್ಮಾಣ ಕಾರ್ಯದಲ್ಲಿ ಯಾವುದೇ ರೀತಿಯ ಮಾರ್ಪಾಡುಗಳಿಗೆ ಅನುಮತಿಸಬಾರದು.
ಜಿಲ್ಲಾ ಎಸ್.ಪಿ.ಗಳು/ಡಿ.ಸಿ.ಪಿ.ಗಳು ಕಾರಾಗೃಹಗಳ ಮೇಲೆ ದಿಢೀರ್/ ಆಶ್ಚರ್ಯಕರ ತಪಾಸಣೆಗಳನ್ನು ಆಗಿಂದಾಗ ನಡೆಸಬೇಕು. ತಲೆಮರೆಸಿಕೊಂಡಿರುವ ಕೈದಿಗಳ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಸರಿಯಾದ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ‘ದ್ವೇಷ ಭಾಷಣ’ ಮತ್ತು ‘ಪ್ರಚೋದನಕಾರಿ ಘೋಷಣೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳ ಬೇಕು.