ಮಂಗಳೂರು: ನಗರದ ಜೆಪ್ಪಿನಮೊಗರು ಎಂಬಲ್ಲಿ ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ಗಲಾಟೆ ನಡೆದು ವಕೀಲ ದಂಪತಿಗೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ದೂರು ದಾಖಲಾಗಿದೆ. ವಕೀಲ ದಂಪತಿಯೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ವ್ಯಕ್ತಿ ಪ್ರತಿದೂರು ದಾಖಲಿಸಿದ್ದಾರೆ. ನ್ಯಾಯವಾದಿ ಜಯಪ್ರಕಾಶ್ ಅವರ ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಸ್ಥಳೀಯ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ನಡುವೆ ತಕಾರಾರು ಎದ್ದಿತ್ತು. ಈ ಬಗ್ಗೆ ಎರಡೂ ಕಡೆಯವರ ನಡುವೆ ಈ ಹಿಂದೆಯೇ ಜಗಳ ನಡೆದಿತ್ತು. ಈ ನಡುವೆ ಜಾಗದ ಮಾಲಕ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರು ಜಯಪ್ರಕಾಶ್ ಅವರ ಮನೆಗೆ ಹೋಗುವ ದಾರಿಯನ್ನು ಅಗೆದು ಹಾಕಿದ್ದರು. ಪರಿಣಾಮ ರಸ್ತೆ ತುಂಬಾ ನೀರು ನಿಂತು ಮೊಣಕಾಲು ಮುಳುಗುವಷ್ಟು ನೀರಿನಲ್ಲಿಯೇ ಜನ ಸಂಚಾರ ಮಾಡಬೇಕಿತ್ತು. ಈ ಬಗ್ಗೆ ವೀಡಿಯೋ ಮಾಡಿ ವಕೀಲ ಜಯಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ದರಿಂದ ಕಾರ್ಪೋರೇಟರ್ ವೀಣಾ ಮಂಗಳ ಅವರು ಜೆಸಿಬಿ ಮೂಲಕ ದುರಸ್ತಿ ಕಾರ್ಯ ನಡೆಸಿದ್ದರು. ವೀಡಿಯೋ ಮಾಡಿರುವ ಬಗ್ಗೆ ರಾಬರ್ಟ್ ವೆಲೆರೀಯನ್ ಮೆಂಡೊನ್ಸಾ ತಕರಾರು ಎತ್ತಿ ಜಯಪ್ರಕಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆಯೂ ಹೊಯ್ಕೈ ನಡೆದಿದೆ. ಅಲ್ಲದೆ ಜಗಳ ನಿಲ್ಲಿಸಲು ಬಂದಿದ್ದ ವಕೀಲ ಜಯಪ್ರಕಾಶ್ ಅವರ ಪತ್ನಿಯ ಮೇಲೆ ವೆಲೆರಿಯನ್ ಅವರು ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಆದ್ದರಿಂದ ಜಯಪ್ರಕಾಶ್ ದಂಪತಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ , ಮಾನಭಂಗ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಕುರಿತು ಪ್ರತಿದೂರು ದಾಖಲಿಸಿರುವ ಆರೋಪಿ ರಾಬರ್ಟ್ ವಲೇರಿಯನ್ ಮೆಂಡೋನ್ಸಾ ಅವರು ಬಳಿ ಬಂದಿದ್ದ ತನಗೆ ಜಯಪ್ರಕಾಶ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆಂದು ಪ್ರತಿದೂರು ದಾಖಲಿಸಿದ್ದಾರೆ. ಜೊತೆಗೆ ರಾಬರ್ಟ್ ವಲೇರಿಯನ್ ಮೆಂಡೋನ್ಸಾ ಹಾಗೂ ಜಯಪ್ರಕಾಶ್ ಅವರು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.