ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಆಯುಕ್ತರಿಗೆ ಇಬ್ಬರು ಬ್ರೋಕರ್‌ಗಳು ಮಾನಹಾನಿಕರ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮೂಡಾ ಆಯುಕ್ತೆ ಉರ್ವ ಠಾಣೆಗೆ ದೂರು ನೀಡಿದ್ದಾರೆ.

ಜನವರಿ 7 ರಂದು ಸಿಬ್ಬಂದಿ ಊಟಕ್ಕೆ ಹೋದ ಸಮಯದಲ್ಲಿ ಮುಡಾ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಮೇಜಿನ ಮೇಲಿದ್ದ ಕಡತಗಳನ್ನು ವಿರೂಪಗೊಳಿಸಿದ ಆರೋಪ, ಅಲ್ಲದೆ ಮೂಡಾದಲ್ಲಿ ನಡೆದಿರುವ ಕೆಲವು ವಿದ್ಯಾಮಾನ, ಮುಡಾ ಕಚೇರಿಯಲ್ಲಿನ ಏಕ-ಸ್ಥಳ ಅನುಮೋದನೆಗಳು ಮತ್ತು ಇತರ ಕೆಲಸಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯವರ್ತಿಗಳು ಹಸ್ತಕ್ಷೇಪ ಮಾಡುವುದನ್ನು ತಡೆಯಲು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಆಯುಕ್ತರು ಉರ್ವ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜನವರಿ 7 ಮತ್ತು ಮಾರ್ಚ್ 27ರ ನಡುವೆ, ಆರೋಪಿಗಳು ವಾಟ್ಸಾಪ್ ಗ್ರೂಪ್ ರಚಿಸಿ, ಇತರ ಮಧ್ಯವರ್ತಿಗಳನ್ನು ಒಟ್ಟುಗೂಡಿಸಿ, ಮೂಡಾ ಆಯುಕ್ತರ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಫೋನ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ.
ಕಚೇರಿಯಲ್ಲಿ ಅಧಿಕೃತ ಕರ್ತವ್ಯಗಳಿಗೆ ಆಗಾಗ್ಗೆ ಅಡ್ಡಿಪಡಿಸಲು ದುರುದ್ದೇಶಪೂರ್ವಕವಾಗಿ ಅವರು ಈ ವ್ಯಾಟ್ಸಾಪ್ ಗ್ರೂಪ್ ರಚಿಸಿದ್ದು, ಕ್ರಿಮಿನಲ್ ಉದ್ದೇಶದಿಂದ ಪಿತೂರಿ ನಡೆಸಿದ್ದಾರೆ. ಅಲ್ಲದೆ ಆಯುಕ್ತರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಕಚೇರಿಯೊಳಗೆ ಸಾರ್ವಜನಿಕ ಶಾಂತಿಯನ್ನು ಕದಡಲು ಪ್ರಯತ್ನಿಸಿದ್ದಾರೆ ಮತ್ತು ಆಯುಕ್ತರ ವಿರುದ್ಧ ಮಾಟಮಂತ್ರ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.