ಬಂಟ್ವಾಳ: ಕರ್ನಾಟಕ ಸರ್ಕಾರ ಕೊಡಮಾಡುವ ಜಾನಪದ ಕ್ಷೇತ್ರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದೈವನರ್ತಕ-ಪಾತ್ರಿ ಲೋಕಯ್ಯಸೇರಾ ಆಯ್ಕೆಯಾಗಿದ್ದಾರೆ. ಅಂಗು ಮತ್ತು ಅಕ್ಕು ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ಇವರು, ಹಿರಿಯರಿಂದ ದೈವಾರಾಧನೆ ಮತ್ತು ದೈವನರ್ತನವನ್ನು ಕಲೆಯನ್ನೇ ಬದುಕಾಗಿಸಿಕೊಂಡವರು. ಕಳೆದ 57 ವರ್ಷಗಳಿಂದ ಜಾನಪದ ಕಲಾವಿದನಾಗಿ, ದೈವಾರಾಧನೆಯ ಕ್ಷೇತ್ರದಲ್ಲಿ ಭೂತಕಟ್ಟುವ ನರ್ತಕ-ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ತುಳುನಾಡಿನ ಕಾರಣಿಕ ದೈವಗಳಾದ ಕಲ್ಲುರ್ಟಿ, ಕಲ್ಕುಡ, ಪಂಜುರ್ಲಿ, ಚಾಮುಂಡಿ, ಧೂಮಾವತಿ, ರಕೇಶ್ವರಿ ಇತ್ಯಾದಿಗಳಿಗೆ ನೇಮಗಳನ್ನು ಆಚಾರದಲ್ಲಿ ಕಟ್ಟಿರುತ್ತಾರೆ. ವರ್ಷದಲ್ಲಿ ಸರಿಸುಮಾರು ನೂರರಂತೆ ಇದುವರೆಗೆ ಸಾವಿರಾರು ಭೂತಗಳನ್ನು ನೇಮ ಕಟ್ಟಿರುತ್ತಾರೆ. ಕುಲದೈವ, ಸೀಮೆದೈವ, ರಾಜನ್ ದೈವಗಳ ನೇಮ ವಹಿಸಿರುವುದಲ್ಲದೆ ಹತ್ತು-ಹಲವು ಊರ ಜಾತ್ರೆಗಳಲ್ಲೂ ಪ್ರಧಾನ ದೈವಗಳ ಪಾತ್ರಿಯಾಗಿ ಸೇವೆಸಲ್ಲಿಸಿದ್ದಾರೆ. ತುಳುನಾಡಿನ ಮೌಖಿಕ ಸಾಹಿತ್ಯವೆನಿಸಿದ ಸಂಧಿ, ದೈವಪುರಾಣಗಳನ್ನು ಪರಂಪರಾನುಗತವಾಗಿ ಅಭ್ಯಾಸಿಸಿ, ದೈವಾರಾಧನೆಯ ಸಂದರ್ಭದಲ್ಲಿ ಆಯಾಯ ದೈವಗಳಿಗೆ ಸಂಬಂಧಿಸಿದ ಸಂಧಿ, ಮದಿಪುಗಳನ್ನು ಬಾಯಿಪಾಠವಾಗಿ ಒಪ್ಪಿಸುವಷ್ಟು ಪ್ರಭುತ್ವವನ್ನು ಹೊಂದಿರುತ್ತಾರೆ. ಭೂತನರ್ತನ ಸೇವೆಯಲ್ಲಿ ಜನರ ನಂಬಿಕೆಗೆ ಚ್ಯುತಿ ಬಾರದಂತೆ ಹೊಸ ಆಯಾಮವನ್ನು ತಂದು ಹಲವು ಪ್ರಶಸ್ತಿ ಮತ್ತು ಸನ್ಮಾನಗಳನ್ನು ಪಡೆದುಕೊಂಡವರು. ಬಂಟ್ವಾಳ ತಾಲೂಕಿನಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು,ಸಾರ್ವಜನಿಕ ಕ್ಷೇತ್ರದ ಹಲವಾರು ಸಂಘಟನೆಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಇವರಿಗೆ 2012 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೆ, ಗಣರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶೃಂಗ ಪ್ರಶಸ್ತಿ, ಸೌರಭ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಗೌರವ ಸನ್ಮಾನಗಳು ದೊರೆತಿವೆ.