ನವೆಂಬರ್ 8 ಇಂದು ಚಂದ್ರಗ್ರಹಣವು ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಉತ್ತರ ಅಮೇರಿಕಾದ ಪಶ್ಚಿಮ ಭಾಗ, ಪೂರ್ವ ರಷ್ಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಮತ್ತು ಭಾರತದ ಪೂರ್ವ ಭಾಗದಲ್ಲಿನ ಅಗರ್ತಲಾ, ಭುವನೇಶ್ವರ್, ಡಾರ್ಜಿಲಿಂಗ್, ಗುವಾಹಟಿ, ಪೋರ್ಟ್ ಬ್ಲೇರ್ ಮುಂತಾದ ಪ್ರದೇಶಗಳಲ್ಲಿಯೂ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕರು ತಿಳಿಸಿದ್ದಾರೆ.
ಇಂದು ಸಂಭವಿಸಲಿದ್ದು, ರಾಜ್ಯದ ಹಲವು ದೇವಸ್ಥಾನಗಳು ಇಂದು ಬಂದ್ ಆಗಲಿವೆ.
ಇಂದು ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ, ಚಂದ್ರ ಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಚಂದ್ರ ಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ, ಗ್ರಹಣದ ನಂತರ ನಡೆಯುವ ಅಭಿಷೇಕ ಮತ್ತು ಮಹಾ ಮಂಗಳಾರತಿ ಹಿನ್ನೆಲೆಯಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲೂ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ.
ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಆಗಲಿದೆ. ಇಂದು ಬೆಳಗ್ಗೆ 9:30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಭೋಜನ ಇರುವುದಿಲ್ಲ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಹಣ ಸ್ಪರ್ಶ ಸಮಯವಾದ 2:39ರಿಂದ ಗ್ರಹಣ ಮೋಕ್ಷ ಸಮಯ 6:19ರತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಚಂದ್ರ ಗ್ರಹಣ ಎಂದೂ ಕರೆಯಲ್ಪಡುವ ಚಂದ್ರಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರನ ಇಂದೇ ಸಾಲಿನಲ್ಲಿ ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಅಂಬ್ರಾ ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಗಾಢವಾದ ಭಾಗದಲ್ಲಿ ಬೀಳುತ್ತಾನೆ. ಇದು ಸಂಭವಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸಲಿದೆಯೇ?
ದೆಹಲಿಯಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದ್ದು, ಸಂಜೆ 5:32ಕ್ಕೆ ಚಂದ್ರೋದಯದಿಂದ ಆರಂಭವಾಗಿ ಸಂಜೆ 6:18ಕ್ಕೆ ಕೊನೆಗೊಳ್ಳಲಿದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿ ಸೇರಿದಂತೆ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಸೂತಕ ಸಮಯ
ಸುತಕ ಅವಧಿಯನ್ನು ಮರೆಯಬೇಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಇದನ್ನು ಅಶುಭ ಅವಧಿ ಎಂದು ಪರಿಗಣಿಸಲಾಗಿದೆ. ಗ್ರಹಣದ ಸಮಯದಲ್ಲಿ ಮನೆಯೊಳಗೆ ಇರಲು ಮತ್ತು ಯಾವುದೇ ಹೊಸ ಕೆಲಸವನ್ನು ಮಾಡುವುದನ್ನು ತಪ್ಪಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಚಂದ್ರ ಗ್ರಹಣ ಸೂತಕವು ಬೆಳಿಗ್ಗೆ 9:21 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:18 ಕ್ಕೆ ಕೊನೆಗೊಳ್ಳುತ್ತದೆ.