ಉಳ್ಳಾಲ : ಉಳ್ಳಾಲ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ಕ್ವಾಟ್ರಸ್ ನಲ್ಲಿ ಬೀದಿ ನಾಯಿಗಳು ಬಿಡಾರ ಹೂಡಿದ್ದು ಕಳೆದ ವಾರ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಮತ್ತು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ಪತಿಗೆ ಹುಚ್ಚು ನಾಯಿಯೊಂದು ಕಚ್ಚಿದ ಪ್ರಕರಣ ತಡವಾಗಿ ವರದಿಯಾಗಿದೆ. ಉಳ್ಳಾಲ ಪೊಲೀಸ್ ಠಾಣಾ ಪಿಸಿಗಳಾದ ಸತೀಶ್ ,ನವೀನ್ ಮತ್ತು ಲೇಡಿ ಪಿಸಿ ಭಾಗ್ಯಶ್ರೀ ಯವರ ಪತಿ ರಂಗನಾಥ್ ಎಂಬವರಿಗೆ ಹುಚ್ಚು ನಾಯಿ ಕಡಿದಿದೆ.ಕಳೆದ ಆ.28 ರಂದು ಪೊಲೀಸ್ ವಸತಿ ಗೃಹದ ಆವರಣದಲ್ಲಿ ಘಟನೆ ನಡೆದಿದೆ. ವಸತಿ ಗೃಹದ ಆವರಣದಲ್ಲಿ ಬೀದಿ ನಾಯಿಗಳು ಸುತ್ತುತ್ತಿದ್ದು ಅದರಲ್ಲೊಂದು ನಾಯಿ ಮೂವರನ್ನ ಕಚ್ಚಿ ಗಾಯಗೊಳಿಸಿದೆ. ಪೊಲೀಸರು ಮಂಗಳೂರಿನ ಆನಿಮಲ್ ಕೇರ್ ನವರಿಗೆ ಕರೆ ಮಾಡಿ ದಾಳಿ ನಡೆಸಿದ ನಾಯಿಯನ್ನ ಕೊಂಡೊಯ್ಯುವಂತೆ ಹೇಳಿದ್ದು ಆನಿಮಲ್ ಕೇರ್ ನವರು ಕಚ್ಚಿದ ನಾಯಿಯ ವಿಡಿಯೋ ತೆಗೆದು ವಾಟ್ಸ್ ಅಪ್ ನಲ್ಲಿ ಕಳಿಸಲು ತಿಳಿಸಿದ್ದು ಪೊಲೀಸರು ನಾಯಿಯ ವಿಡಿಯೋವನ್ನ ಕಳುಹಿಸಿದ್ದಾರೆ. ಹುಚ್ಚು ನಾಯಿ ಕಡಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಗಳು ಆಂಟಿ ರ‍್ಯಾಬಿಸ್ ಲಸಿಕೆ ಪಡೆದು ಚಿಕಿತ್ಸೆ ಪಡೆದಿದ್ದಾರೆ.ವಸತಿಗೃಹದಲ್ಲಿರುವ ಇತರ ನಾಯಿಗಳಿಗೂ ರ‍್ಯಾಬಿಸ್ ಹರಡಿರುವ ಬಗ್ಗೆ ಬಲವಾದ ಶಂಕೆ ಉಂಟಾಗಿದ್ದು ಪೊಲೀಸರು ಎಲ್ಲ ನಾಯಿಗಳನ್ನ ಹಿಡಿಯುವಂತೆ ಆನಿಮಲ್ ಕೇರ್ಗೆ ಮನವಿ ಮಾಡಿದ್ದಾರೆ.