ಮಂಗಳೂರು: ಸೈಬರ್ ಕೈಂ ಬ್ರಾಂಚ್ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿಯೋರ್ವರನ್ನು ಬೆದರಿಸಿ 35 ಲಕ್ಷ ರೂ ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯೋರ್ವರು ಸೆಪ್ಟೆಂಬರ್ 24ರಂದು ಮನೆಯಲ್ಲಿರುವಾಗ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಆತನನ್ನು ಮುಂಬಯುಯ ಡಿಎಚ್‌ಎಲ್ ಕೊರಿಯರ್ ಸರ್ವಿಸ್ ಕಂಪೆನಿಯಕಾರ್ತಿಕ್‌ಶರ್ಮಾ ಎಂದು ಪರಿಚಯಿಸಿಕೊಂಡು ‘ಮುಂಬಯಿಯಿಂದ ತೈವಾನ್‌ಗೆ ಕಾನೂನುಬಾಹಿರವಾಗಿ ಮಾದಕ ವಸ್ತುಗಳಿರುವ ಕೊರಿಯರ್ ನಿಮ್ಮ ಹೆಸರಿನಲ್ಲಿ ಬಂದಿದೆ. ಅದನ್ನು ಮುಂಬಯಿ ಸೈಬರ್ ಕೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನೀವು ಸೈಬರ್ ಕ್ರೈಂ ಅಧಿಕಾರಿಗಳೊಂದಿಗೆ ಮಾತನಾಡಬೇಕು’ ಎಂದು ಹೇಳಿ 9957376759 ನಂಬರ್ ಅನ್ನು ನೀಡಿದ್ದಾನೆ. ದೂರುದಾರರು ಆ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಆತನನ್ನು ಸೈಬರ್ ಕೈಂನ ಅಧಿಕಾರಿ ಪ್ರಾಣೇಶ್ ಗುಪ್ತಾ ಎಂದು ಪರಿಚಯಿಸಿಕೊಂಡು ವೀಡಿಯೋ ಕಾಲ್ ಮೂಲಕ ದೂರುದಾರರಲ್ಲಿ ಮಾತನಾಡಿ ‘ಅಂತಾರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಹಣ ನೀಡಿದರೆ ಈ ಪ್ರಕರಣದಿಂದ ನಿಮ್ಮನ್ನುಮುಕ್ತಗೊಳಿಸುತ್ತೇವೆ’ ಎಂದು ಹೇಳಿದ್ದಾನೆ. ಇದರಿಂದ ಭಯಗೊಂಡ ದೂರುದಾರರು ಅಪರಿಚಿತ ವ್ಯಕ್ತಿ ನೀಡಿದ ಖಾತೆಗೆ ಒಟ್ಟು 35 ಲ.ರೂ.ಗಳನ್ನು ವರ್ಗಾಯಿಸಿದ್ದಾರೆ. ಅನಂತರ ಇದೊಂದು ವಂಚನೆ ಎಂಬುದಾಗಿ ಗೊತ್ತಾಗಿದೆ.