ಮಂಗಳೂರು : ಪಿಕಪ್ ವಾಹನವೊಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಓಡಾಡುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ ಸಿಂಧನೂರು ಶಾಸಕರ ಸೋದರಳಿಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ಹೊರವಲಯದಲ್ಲಿರುವ ಕುಲೈನಲ್ಲಿ ಶನಿವಾರ ಈ ಘಟನೆ ನಡೆದಿದೆ.

ಮೃತರನ್ನು ದೀಪು ಗೌಡ ಅಲಿಯಾಸ್ ಪೊಂಪ ಗೌಡ (48) ಎಂದು ಗುರುತಿಸಲಾಗಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವರು. ಅವರು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಮಗ. ಪ್ರದೀಪ್ ಮತ್ತು ನಾಗರಾಜ್ ಎಂಬ ಇಬ್ಬರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.