ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಡೀ ಪ್ರಕರಣದ ಕಿಂಗ್ ಪಿನ್ ಮುರುಗನ್ ಡಿ ದೇವರ್ ಮೇಲೆ ಪೊಲೀಸರು ಶೂಟೌಟ್ ಮಾಡಿದ್ದಾರೆ. ಕರ್ನಾಟಕ- ಕೇರಳ ಗಡಿಭಾಗದ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾಗ ಆರೋಪಿ ಮುರುಗನ್ ಡಿ ದೇವರ್ ಎಸ್ಕೇಪ್ ಆಗಲು ಯತ್ನಿಸಿದ ವೇಳೆ ಪೊಲೀಸರು ಗುಂಡುಹಾರಿಸಿದ್ದಾರೆ. ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುರುಗನ್ ದೇವರ್ ನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು. ಈಗಾಗಲೇ ಬ್ಯಾಂಕ್ ದರೋಡೆ ಪ್ರಕರಣದ ಪ್ರಮಖ ಎಲ್ಲಾ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇದೀಗ ತನಿಖೆ ಮುಂದಿನ ಭಾಗವಾಗಿ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕೊಂಡೊಯ್ಯಲಾಗುತ್ತಿದೆ.
ಇಂದು ಮಧ್ಯಾಹ್ನ ಸ್ಥಳ ಮಹಜರು ಉದ್ದೇಶಕ್ಕಾಗಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಫೈರಿಂಗ್ ಮಾಡಿದ್ದು ಕಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಗಾಯಾಳು ಆರೋಪಿಯನ್ನು ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಯಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬವರಿಗೆ ಗಾಯವಾಗಿದೆ. ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಮುರುಗನ್ ಪರಾರಿಯಾಗಲು ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ನಾಲ್ಕೇ ದಿನದಲ್ಲಿ ಕಣ್ಣನ್ ಮಣಿಯನ್ನು ಬಂಧಿಸಿ, ಸ್ಥಳ ಮಹಜರು ಕರೆದೊಯ್ದಿದ್ದಾಗಲೂ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು. ಇದೀಗ ಎರಡನೇ ಬಾರಿಗೆ ಗುಂಡು ಹಾರಿಸಿದ್ದಾರೆ.