ಮಂಗಳೂರು: ನಕಲಿ ನೋಟುಗಳನ್ನು ಚಲಾಯಿಸಿರುವ ಆರೋಪಿ ಸಾಬೀತಾದ ಹಿನ್ನೆಲೆಯಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ 5ವರ್ಷಗಳ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಬ್ಬಾಸ್ (57) ಶಿಕ್ಷೆಗೊಳಗಾದ ಅಪರಾಧಿ. ಅಬ್ಬಾಸ್ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ಕಟ್ಟಡದ 1ನೇ ಮಹಡಿಯಲ್ಲಿನ ಶ್ರೀಕಟೀಲ್ ಎಂಟರ್ ಪ್ರೈಸಸ್‌ನಲ್ಲಿ ಮಕ್ಕಳ ಪ್ರಾಜೆಕ್ಟ್ ವರ್ಕ್‌ಗೆಂದು ಸುಳ್ಳು ಹೇಳಿ 100ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕಲರ್ ಪ್ರಿಂಟ್ ಮಾಡಿಸಿ ನಕಲಿ ಮಾಡಿದ್ದನು.
2020ರ ಅ.31ರಂದು 12.30ಕ್ಕೆ ಮಾರ್ಗನ್ಸ್ ಗೇಟ್ ಜಂಕ್ಷನ್ ಬಳಿ ಇರುವ ಅಂಗಡಿಗಳಲ್ಲಿ ವಸ್ತುಗಳನ್ನು ಖರೀಸುವ ನೆಪದಲ್ಲಿ ನಕಲಿ ನೋಟುಗಳನ್ನು ಚಲಾವಣೆಗೆ ಪ್ರಯತ್ನಿಸುತ್ತಿದ್ದಾನೆ. ಈ ಸಂದರ್ಭ ಸಿ.ಸಿ.ಬಿ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್. ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯಲ್ಲಿದ್ದ 11 ನಕಲಿ ನೋಟುಗಳನ್ನು ಹಾಗೂ 2 ಅಸಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಮಂಗಳೂರು ದಕ್ಷಿಣ ಪೊಲೀಸ್ ಉಪ ನಿರೀಕ್ಷಕ ಸುರೇಶ್ ಕುಮಾರ್ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣವು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.
ಅಭಿಯೋಜನೆ ಪರ ಒಟ್ಟು 13ಸಾಕ್ಷಿದಾರರನ್ನು ವಿಚಾರಿಸಿ, 14ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಸುನಿತಾ ಎಸ್.ಜಿ.ಯವರು ನಕಲಿ ನೋಟುಗಳನ್ನು ಚಲಾವಣೆ ಮಾಡಿರುವ ಅಪರಾಧಕ್ಕೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ, ಬಿ. ಪ್ರಕಾಶ್ಚಂದ್ರ ಶೆಟ್ಟಿ ಸರ್ಕಾರದ ಪರವಾಗಿ ಪ್ರಕರಣ ನಡೆಸಿದ್ದಾರೆ. ಬಳಿಕ ಹರಿಶ್ಚಂದ್ರ ಉದ್ಯಾವರ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.