ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ ಮೇಯರ್ ಆಗಿ ಮತ್ತು ಉಪಮೇಯರ್ ಆಗಿ ಬಿಜೆಪಿಯ ಸುನಿತಾ ಆಯ್ಕೆಯಾಗಿದ್ದಾರೆ.
ಶುಕ್ರವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮೈಸೂರು ಉಪವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಚುನಾವಣೆ ನಡೆಸಿದರು.
ಈ ಅವಧಿಯ ನಾಲ್ಕನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.
ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಇಬ್ಬರು ಎಸ್‌ಡಿಪಿಐ ಸದಸ್ಯರು ಇದ್ದಾರೆ.
ಹಿಂದಿನ ಅವಧಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರು ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದರು.
ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹುದ್ದೆ, ಮಂಗಳೂರು ಉತ್ತರಕ್ಕೆ ಉಪಮೇಯರ್ ಹುದ್ದೆ ಸಿಕ್ಕಿದೆ.
ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಾಂಗ್ರೆಸ್ನಿಂದ ನವೀನ್ ಆರ್.ಡಿಸೋಜ ನಾಮಪತ್ರ ಸಲ್ಲಿಸಿದ್ಧರು.