ಮಂಗಳೂರು: ಸೈಬರ್ ವಂಚನೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಸ್ಥಾಪಿಸಲಾಗಿರುವ ದ.ಕ.ಜಿಲ್ಲೆಯ ಎಲ್ಲಾ ಸೆನ್ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಸರಕಾರ ಮುಂದಾಗಿವೆ. ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯ ಸೆನ್ ಪೊಲೀಸ್ ಠಾಣೆಗಳನ್ನು ಬಲಪಡಿಸುವ ಸಲುವಾಗಿ ಮೇಲ್ದರ್ಜೆಗೇರಿಸಲಾಗಿದೆ. ಅದರಂತೆ ಪ್ರತಿಯೊಂದು ಸೆನ್ ಪೊಲೀಸ್ ಠಾಣೆಗಳಿಗೂ ಡಿವೈಎಸ್ಪಿ/ಎಸಿಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಒಂದಲ್ಲೊಂದು ಕಾರಣಕ್ಕೆ ಜನರು ಸೈಬರ್ ವಂಚಕರಿಂದ ಮೋಸ ಹೋಗುತ್ತಿದ್ದಾರೆ. ಹಾಗಾಗಿ ಸೆನ್ ಠಾಣೆಗಳ ಮೇಲಿನ ಒತ್ತಡವೂ ಅಧಿಕವಾಗಿವೆ ಎನ್ನಲಾಗಿವೆ. ಈ ಹಿಂದೆ ಇದ್ದ ಸೈಬರ್ ಠಾಣೆಗಳನ್ನು ಸೆನ್ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈ ಸೆನ್ (ಸೈಬರ್, ಎಕನಾಮಿಕ್, ನಾರ್ಕೊಟಿಕ್) ಠಾಣೆಗಳು ಸೈಬರ್ ಪ್ರಕರಣಗಳ ಜೊತೆಗೆ ಇತರ ಆರ್ಥಿಕ ವಂಚನೆ, ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ಕೂಡಾ ನಿಭಾಯಿಸುತ್ತವೆ. ಆದರೆ ಸೈಬರ್ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳುತ್ತಲೇ ಅದನ್ನು ಭೇದಿಸುವುದು ಕೂಡಾ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಹಾಗಾಗಿ ಸೈಬರ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮಂಗಳೂರು ನಗರ ಸೆನ್ ಪೊಲೀಸ್ ಠಾಣೆ ಮೇಲ್ದರ್ಜೆಗೇರಿವೆ. ಠಾಣೆಗೆ ಎಸಿಪಿಯವರನ್ನು ಪೂರ್ಣಕಾಲಿಕವಾಗಿ ನಿಯೋಜಿಸಲಾಗಿ ದೆ. ಇವರ ಜೊತೆಗೆ ಓರ್ವ ಇನ್‌ಸ್ಪೆಕ್ಟರ್ ಮತ್ತು 8 ಸಬ್ ಇನ್ ಸ್ಪೆಕ್ಟರ್‌ಗಳು ಕೂಡ ಇದ್ದಾರೆ. ದ.ಕ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿ (ಗ್ರಾಮಾಂತರ) ಯಲ್ಲಿ ಮತ್ತು ಪೊಲೀಸ್ ಕಮಿಷನರೆಟ್(ನಗರ ವ್ಯಾಪ್ತಿ)ನಲ್ಲಿ ಪ್ರತ್ಯೇಕವಾದ ಎರಡು ಸೆನ್ ಪೊಲೀಸ್ ಠಾಣೆಗಳಿವೆ. ಜಿಲ್ಲಾ ಸೆನ್ ಠಾಣೆಯ ಮುಖ್ಯಸ್ಥರನ್ನಾಗಿ ಡಿವೈಎಸ್ಪಿಯನ್ನು ನಿಯೋಜಿಸಲಾಗಿದೆ. ಆದರೆ ಇಲ್ಲಿನ ಇನ್‌ಸ್ಪೆಕ್ಟರ್ ಹುದ್ದೆ ಭರ್ತಿಯಾಗದೆ 2 ವರ್ಷಗಳು ಕಳೆದಿವೆ. ಇಲ್ಲಿ ಪ್ರಭಾರ ‘ಇನ್ಸ್‌ಪೆಕ್ಟರ್‌ಗಳೇ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲದೆ ಠಾಣೆಯ ಸಿಬ್ಬಂದಿಯ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಮಂಗಳೂರು ನಗರದ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 195 ಪ್ರಕರಣಗಳು ದಾಖಲಾಗಿದ್ದು, ಈ ವರ್ಷ 35 ಪ್ರಕರಣಗಳು ದಾಖಲಾಗಿವೆ. ಸೈಬರ್ ಕೈಂ ಹೆಲ್ಡ್‌ಲೈನ್ (1930) ಮೂಲಕ ಮಂಗಳೂರು ಸೆನ್ ಠಾಣೆಗೆ ತಿಂಗಳಿಗೆ ಸರಾಸರಿ 200 ಕರೆಗಳು ಬರುತ್ತವೆ. ದ.ಕ. ಜಿಲ್ಲಾ ಸೆನ್ ಠಾಣೆಯಲ್ಲಿ ಈ ವರ್ಷದ ಜನವರಿಯಿಂದ ಈವರೆಗೆ ಆನ್‌ಲೈನ್ ವಂಚನೆಗೆ ಸಂಬಂಧಿಸಿ 49 ಎಫ್‌ಐಆರ್ ದಾಖಲಾಗಿವೆ. ಜೊತೆಗೆ ರಾಷ್ಟ್ರೀಯ ಪೋರ್ಟಲ್‌ನಿಂದ (1930) ವರ್ಗಾವಣೆಗೊಂಡ ಪ್ರಕರಣಗಳು ಕೂಡ ಇವೆ. ತಿಂಗಳಿಗೆ ಸರಾಸರಿ 50ಕ್ಕೂ ಅಧಿಕ ದೂರುಗಳು ದಾಖಲಾಗುತ್ತವೆ.