ಮಂಗಳೂರು: ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿದ್ದಾರೆ.

ಮಂಗಳೂರು ಮೂಲದ ಪ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಅವರಿಗೆ ಈ ಸದಾವಕಾಸ ದೊರಕಿದ್ದು, ಆಕೆ ಯುದ್ಧ ವಿಮಾನ ಸ್ಕ್ಯಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಜಾಗ್ವಾರ್ ಯುದ್ಧ ವಿಮಾನವನ್ನು ಇದುವರೆಗೆ ಮಹಿಳಾ ಪೈಲಟ್‌ಗಳು ಶಾಶ್ವತ ನೆಲೆಯಲ್ಲಿ ಮುನ್ನಡೆಸಿಲ್ಲ. ತನುಷ್ಕಾ ಮಿಲಿಟರಿ ಹಿನ್ನೆಲೆಯ ಕುಟುಂಬದವರು. ಅವರ ತಂದೆ, ಅಜ್ಜ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದರೂ 2007ರಿಂದ ತನುಷ್ಕಾ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹಾಗಾಗಿ “ನಾನು ಕುಡ್ಲದವಳು” ಎಂದು ಹೆಮ್ಮೆಯಿಂದ ಹೇಳುತ್ತಾಳೆ. ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರು ಪ್ರಸ್ತುತ ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ತನುಷ್ಕಾ ಸುರತ್ಕಲ್ ಡಿಪಿಎಸ್ ಎಂಆರ್‌ಪಿಎಲ್ ಶಾಲೆ ಯಲ್ಲಿ ಎಸೆಸೆಲ್ಸಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ಶಿಕ್ಷಣದ ಬಳಿಕ ಮಣಿಪಾಲ ಎಂಐಟಿಯಲ್ಲಿ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 2022ರಲ್ಲಿ ಬಿ.ಟೆಕ್. ಪದವಿ ಗಳಿಸಿದ್ದಾಳೆ. “ಚಿಕ್ಕಂದಿನಿಂದಲೂ ಸೇನೆಗೆ ಸೇರ ಬೇಕೆಂಬ ಹಂಬಲ ಇತ್ತು. ಆದರೆ ವಾಯುಪಡೆಗೆ ಸೇರುತ್ತೇನೆ, ಅದರಲ್ಲೂ ಸಮರ ವಿಮಾನದ ಪೈಲಟ್ ಆಗು ತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ” ಎನ್ನುತ್ತಾರೆ ತನುಷ್ಕಾ.
ಇದೀಗ ತನುಷ್ಕಾ ಸೇನಾ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿರುವುದು ಮಂಗಳೂರಿನವರಿಗೆ ಖುಷಿ ಹಾಗೂ ಹೆಮ್ಮೆಯ ವಿಚಾರವಾಗಿದೆ.