ಬೆಂಗಳೂರು: ಪೊಲೀಸ್ ವಶದಲ್ಲಿರುವ ಆರೋಪಿಗಳ ನಿತ್ಯದ ಆಹಾರ ಭತ್ಯೆೆಯನ್ನು 75 ರೂ.ನಿಂದ 150 ರೂ.ಗೆ ಏರಿಕೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಪೊಲೀಸರು ಕಳ್ಳತನ, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುತ್ತಿದ್ದ ಆರೋಪಿಗಳನ್ನು ಕೋರ್ಟ್ ಅನುಮತಿ ಪಡೆದು ಪೊಲೀಸ್ ಕಸ್ಟಡಿ ಪಡೆಯುತ್ತಾರೆ. ಅಂತಹ ಆರೋಪಿಗಳ ಪ್ರತಿ ನಿತ್ಯದ ಆಹಾರ ಭತ್ಯೆೆಗೆ 75 ರೂ. ಅನ್ನು ಇಲಾಖೆ ನೀಡುತ್ತಿತ್ತು. ಆದರೆ, ಇತ್ತೀಚಿಗೆ ತರಕಾರಿ ಹಾಗೂ ಇತರೆ ಆಹಾರ ಪದಾರ್ಥಗಳ ದರಗಳು ದುಬಾರಿಯಾಗಿರುವ ಹಿನ್ನೆೆಲೆಯಲ್ಲಿ 75 ರೂ. ವೆಚ್ಚದಲ್ಲಿ ಆರೋಪಿಗಳಿಗೆ ಆಹಾರ ಒದಗಿಸುವುದು ಕಷ್ಟಕರವಾಗಿದೆ. ಠಾಣಾಧಿಕಾರಿಗಳೇ ತಮ್ಮ ಸ್ವಂತ ಹಣದಿಂದ ಈ ವೆಚ್ಚವನ್ನು ಭರಿಸುತ್ತಿದ್ದಾರೆ. ಜತೆಗೆ ಪ್ರಕರಣವನ್ನು ಪತ್ತೆೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟಾಗಿರುವುದರಿಂದ ಪೊಲೀಸ್ ವಶದಲ್ಲಿರುವ ಆರೋಪಿಗಳಿಗೆ ಉತ್ತಮ ಆಹಾರವನ್ನು ಒದಗಿಸಬೇಕಾಗಿದೆ. ಹೀಗಾಗಿ 75 ರೂ.ನಿಂದ 300 ರೂ.ಗಳಿಗೆ ಹೆಚ್ಚಿಸಬೇಕೆಂದು ಕಳೆದ ವರ್ಷ ಸರ್ಕಾರಕ್ಕೆೆ ಪೊಲೀಸ್ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಇದೀಗ ಸರ್ಕಾರದ ಸೂಚನೆ ಮೇರೆಗೆ 75 ರೂ.ನಿಂದ 150 ರೂ.ಗೆ ಆರೋಪಿಗಳ ಆಹಾರ ಭತ್ಯೆೆ ಹೆಚ್ಚಳ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.