ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿ ಮತ್ತು ಉಳ್ಳಾಲದ ಸೀಗ್ರೌಂಡ್‌ನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರಿಂದ ಅಹವಾಲು ಬಂದಿದ್ದು, ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ತಜ್ಞರ ಸಮಿತಿಯೊಂದಿಗೆ ಸಮೀಕ್ಷೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಅವರು ಕಡಲ್ಕೊರೆತಕ್ಕೀಡಾದ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ಣ ಪ್ರದೇಶಕ್ಕೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಬಂದರು ಸಚಿವ ಅಂಗಾರ ಜತೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರಕಾರ ತಮ್ಮ ಪಕ್ಷದ ಶಾಸಕರು ಆಡಳಿತವಲ್ಲದ ಪ್ರದೇಶಕ್ಕೂ ಭೇಟಿ ನೀಡಿ ಹಾನಿಗೊಳಗಾದಂತಹ ಮನೆಮಂದಿಗೆ ಸಹಾಯವನ್ನು ಮಾಡುತ್ತಿದೆ, ಕಳೆದ 60 ವರ್ಷದಿಂದ ಕಾಂಗ್ರೆಸ್ ಸರಕಾರವಿದ್ದಾಗಲೂ ಸಮುದ್ರವೂ ಇತ್ತು ಕೊರೆತವೂ ಇತ್ತು. ಅಷ್ಟೂ ವರ್ಷಗಳಲ್ಲಿ ಸರಿಪಡಿಸಲು ಸಾಧ್ಯವಾಗದವರು ಟೀಕೆ ಮಾಡುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಟೀಕೆಗೆ ಪ್ರತಿಕ್ರಿಯೆ ನೀಡಿದರು.
ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ ಮರವಂತೆ ಶೈಲಿಯಲ್ಲೇ ಕಡಲ್ಕೊರೆತ ತಡೆ ಬೇಲಿಯನ್ನು ರಚಿಸುವ ಯೋಜನೆ ರೂಪಿಸುತ್ತೇವೆ. ಪ್ರಾಥಮಿಕವಾಗಿ ತಜ್ಞರ ವರದಿಯನ್ನು ಪಡೆದುಕೊಂಡ ಬಳಿಕವಷ್ಟೇ ತೀರ್ಮಾನಕ್ಕೆ ಬರುತ್ತೇವೆ ಎಂದರು. ಸಚಿವ ಎಸ್. ಅಂಗಾರ, ಡಿಸಿ ಡಾ| ರಾಜೇಂದ್ರ ಕೆ.ವಿ., ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.