ಉಪ್ಪಿನಂಗಡಿ: ಉಪ್ಪಿನಂಗಡಿಯ ಪೆರಿಯಡ್ಕ ಪ್ರದೇಶದಲ್ಲಿ ತಡರಾತ್ರಿ ಯುವಕನೋರ್ವನ ಕುಕೃತ್ಯ ಹೆಚ್ಚುತ್ತಲಿದ್ದು, ಆತನ ಕುಚೇಷ್ಟೆ, ಚಲನವಲನದ ಬಗ್ಗೆ ಸ್ಥಳೀಯ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದೆ.
ಕೆಲವು ಸಮಯಗಳ ಹಿಂದೆ ಮನೆಗೆ ನುಗ್ಗುವ ವ್ಯಕ್ತಿ ಮಹಿಳೆಯರು ಮಲಗುವ ಕೋಣೆಯನ್ನು ಪ್ರವೇಶಿಸಿರುವುದು, ಎಚ್ಚರಗೊಂಡಾಗ ಓಡಿ ತಪ್ಪಿಸಿಕೊಂಡಿರುವುದು, ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯಿಂದ ಇಣುಕಲು ಯತ್ನಿಸಿದ್ದ ವ್ಯಕ್ತಿ, ಅನಂತರ ಆ ವ್ಯಕ್ತಿ ಸ್ಥಳೀಯ ವ್ಯಾಪಾರಿ ಅಬ್ದುಲ್ ರಹಿಮಾನ್ ಪೊಲೀಸರ ವಶವಾಗುತ್ತಾನೆ.
ಬಳಿಕ ಇಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದರು.
ಈ ಮಧ್ಯೆ ಮತ್ತೆ ಇಂತಹದ್ದೇ ಕೃತ್ಯಗಳು ಸಂಭವಿಸಲು ಪ್ರಾರಂಭವಾಗಿದ್ದು, ಯುವಕನೋರ್ವ ನಸುಕಿನ 3.30ರ ಸುಮಾರಿಗೆ ಪೆರಿಯಡ್ಕದ ಜನತಾ ಕಾಲನಿಯ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಪ್ರಕರಣದಲ್ಲಿ ಮನೆಯ ಮಂದಿ ಎಚ್ಚರಗೊಂಡಾಗ ಆತ ಬೇಲಿ ಹಾರಿ ಅಡಗಿ ಕುಳಿತುಕೊಳ್ಳುವುದು. ಬೆನ್ನಟ್ಟಿ ಬಂದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವುದು ಸಮೀಪದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಮೌಖೀಕ ದೂರು ಬಂದಿದೆ
ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ಅವರು ಮಾತನಾಡಿ, ಯಾರೂ ಅಧಿಕೃತ ದೂರು ನೀಡಿಲ್ಲ. ಮೌಖೀಕ ದೂರು ನೀಡಿದ ಅನುಸಾರ ಘಟನ ಸ್ಥಳಕ್ಕೆ ಹೋಗಿ ಸಿಸಿ ಕೆಮರಾ ಪರಿಶೀಲನೆ ಮಾಡಲಾಗಿದೆ. ಈ ಹಿಂದೆ ಅಲ್ಲಿ ಮನೆಗೆ ನುಗ್ಗಿದ ಆರೋಪದಡಿ ಬಂಧಿತನಾಗಿದ್ದ ಆರೋಪಿಯ ಮೇಲೂ ಸಂದೇಹವಿರಿಸಿ ಪರಿಶೀಲನೆ ನಡೆಸಲಾಗಿದೆ. ಆದರೆ ದೃಶ್ಯಾವಳಿಯಲ್ಲಿ ಸೆರೆಯಾದ ವ್ಯಕ್ತಿಗೂ, ಈ ಹಿಂದಿನ ಪ್ರಕರಣದ ಆರೋಪಿಗೂ ಹೊಂದಿಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.