ಮಂಗಳೂರು: ಮೆಕ್ಕೆಜೋಳ, ಹೆಸರುಕಾಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಧಾನಿ ಮೋದಿಗೆ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದರು.
ಈ ಕುರಿತು ಸಚಿವ ದಿನೇಶ್ ಗುಂಡರಾವ್ ಪೋಸ್ಟ್ ಹಂಚಿಕೊಂಡಿದ್ದು, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 2,400 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 8,768 ರೂ.ರಂತೆ ಒSP ಘೋಷಿಸಿದ್ದರೂ, ಕರ್ನಾಟಕದಲ್ಲಿ ಪ್ರಸ್ತುತ ಬೆಲೆ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 1,600-1,800 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 5,400 ರೂ. ಆಗಿದ್ದು, ಇದು ತೀವ್ರ ಮತ್ತು ಆಘಾತಕಾರಿ ಕುಸಿತವಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು 32 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಲಭ್ಯವಿದೆ. ಆದ್ದರಿಂದ, ಭಾರತ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಕೆಳಗಿನಂತೆ, ದರ ನಿಗದಿ ಮಾಡುವಂತೆ ವಿನಂತಿ ಮಾಡಲಾಗಿದೆ.
ಕರ್ನಾಟಕದ ರೈತರು ದೇಶದ ಆಹಾರ ಭದ್ರತೆ, ಎಥನಾಲ್ ಸಾಮರ್ಥ್ಯ ವಿಸ್ತರಣೆ ಮತ್ತು ಆರ್ಥಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ನ್ಯಾಯಯುತ ಸಂಗ್ರಹಣೆ ಮತ್ತು ಸಮಾನ ಎಥನಾಲ್ ಹಂಚಿಕೆಯನ್ನು ಖಚಿತಪಡಿಸುವುದು ಅವರ ಹಕ್ಕು ಮಾತ್ರವಲ್ಲ, ಅದು ರಾಷ್ಟ್ರದ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ರೈತರ ತೀವ್ರ ಸಂಕಷ್ಟವನ್ನು ತಪ್ಪಿಸಲು ಮತ್ತು ನಮ್ಮ ರಾಷ್ಟ್ರದ ಕೃಷಿ ಬೆನ್ನೆಲುಬಾದವರ ಬದುಕನ್ನು ಸುಸ್ಥಿರವಾಗಿಡಲು ಮಾನ್ಯ ಪ್ರಧಾನಿಗಳು ಮನಸ್ಸು ಮಾಡಬೇಕಾಗಿ, ರೈತರ ಹಿತ ಕಾಯಬೇಕಾಗಿ ವಿನಂತಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.




